ಬಂಟ್ವಾಳ, ಮೇ 26, 2023 (ಕರಾವಳಿ ಟೈಮ್ಸ್) : ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ತಾಲೂಕಿನ ಪ್ರಮುಖ ಅಧಿಕಾರಿಗಳನ್ನು ಕರೆದು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಶಾಸಕ ಯು ರಾಜೇಶ್ ನಾಯಕ್ ತುರ್ತು ಸಭೆ ನಡೆಸಿದರು.
ಮಳೆ ಬರುವವರೆಗೆ ನೇತ್ರಾವತಿ ನದಿಯ ನೀರು ಸಹಿತ ಇತರ ಮೂಲಗಳನ್ನು ಉಪಯೋಗಿಸಿಕೊಂಡು ಜನರಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕು. ಶಂಭೂರು ಎ ಎಂ ಆರ್ ಡ್ಯಾಂನಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಶೇಖರಣೆಯಾಗಿದ್ದರೆ ಅಲ್ಲಿಂದ ಗೇಟ್ ತೆರವು ಮಾಡಿ ಹೆಚ್ಚಿನ ನೀರನ್ನು ಕೆಳ ಭಾಗಕ್ಕೆ ಹರಿಯಲು ಬಿಟ್ಟರೆ, ಗ್ರಾಮಾಂತರ ಪ್ರದೇಶ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ನೀರಿನ ಬರ ನೀಗಿಸಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಜೊತೆಗೆ ಮಾತನಾಡಿ ವ್ಯವಸ್ಥೆ ಮಾಡುವ ಭರವಸೆಯನ್ನು ಇದೇ ವೇಳೆ ಶಾಸಕರು ನೀಡಿದರು.
ಮಳೆಗಾಲ ಆರಂಭವಾಗುವರೆಗೆ ತಾಲೂಕಿನ ಜನತೆಗೆ ಮೂಲಭೂತ ಸೌಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಪ್ರಮುಖವಾಗಿ ತಾಲೂಕಿನ ಪ್ರತಿಯೊಬ್ಬರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಡಬೇಕಾಗದ ಕರ್ತವ್ಯಗಳನ್ನು ಗ್ರಾಮ ಮಟ್ಟದ ಅಧಿಕಾರಿಗಳಿಗೆ ತಿಳಿಸುವಂತದ್ದು, ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆದು ಸಭೆ ಕರೆಯಬೇಕಾಗಿದೆ ಎಂದು ತಿಳಿಸಿದರು. ಜೊತೆಗೆ ಮಳೆಗಾಲ ಆರಂಭವಾದ ಬಳಿಕ ನೆರೆ ಸಹಿತ ಇತರ ಪಾಕೃತಿಕ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ನಾಯ್ಕ್ ತಿಳಿಸಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ, ತಾಲೂಕು ಪಂಚಾಯತ್ ಇಒ ರಾಜಣ್ಣ, ಇಂಜಿನಿಯರ್ ಗಳಾದ ಕೃಷ್ಣ, ಜಗದೀಶ್, ಕುಶ ಕುಮಾರ್, ನಾಗೇಶ್ ಭಾಗವಹಿಸಿದ್ದರು.
ಮೇ 29 ರಂದು ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಪಕೃತಿ ವಿಕೋಪದ ಮುಂಜಾಗೃತ ಕ್ರಮವಹಿಸುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೆÇೀರ್ಸ್ ಸಮಿತಿ ಸಭೆಯನ್ನು ಮೇ 29 ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಎಸ್ ಜೆ ಎಸ್ ವೈ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ತಿಳಿಸಿದ್ದಾರೆ.
0 comments:
Post a Comment