ಬಂಟ್ವಾಳ, ಮೇ 26, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಹೊರಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೆರೆಯ ಕೋಮುಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳ ತಾಲೂಕಿನಲ್ಲೂ ಅಶಾಂತಿ ಸೃಷ್ಟಿಸುವ ಪ್ರಯತ್ನಪಟ್ಟಿದ್ದಾರೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರಿಗೆ ಲಿಖಿತ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.
ಈ ಬಗ್ಗೆ ಶುಕ್ರವಾರ ಪೊಲೀಸ್ ಅಧಿಕಾರಿಗೆ ಲಿಖಿತ ದೂರು ನೀಡಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ನೇತೃತ್ವದ ನಿಯೋಗ ಮೇ 22 ರಂದು ಬೆಳ್ತಂಗಡಿಯಲ್ಲಿ ನಡೆದ ವಿಜಯೋತ್ಸವದ ಸಾರ್ವಜನಿಕ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ರಾಜ್ಯದ ಘನವೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಅವಹೇಳನಕಾರಿ ಮತ್ತು ಸುಳ್ಳು ಆರೋಪವನ್ನು ಮಾಡಿದ್ದಾರೆ. ಇವರು ಸಾರ್ವಜನಿಕ ಸಭೆಯಲ್ಲಿ ಮಾಡಿದ ಈ ಪ್ರಚೋದನಕಾರಿ ಭಾಷಣ ನೆರೆ ತಾಲೂಕು ಆಗಿರುವ, ಕೋಮು ಸೂಕ್ಷ್ಮ ಪ್ರದೇಶವೂ ಆಗಿರುವ ಬಂಟ್ವಾಳದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಘಟಕ ಬೆಳ್ತಂಗಡಿ ಶಾಸಕರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕದ ಜನಹಿತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರವರ ಘನತೆ-ಗೌರವಕ್ಕೆ ಚ್ಯುತಿ ತಂದಿರುವ ಶಾಸಕ ಹರೀಶ್ ಪೂಂಜಾ ಈ ಮೂಲಕ ಮುಖ್ಯಮಂತ್ರಿಗಳ ಬಗ್ಗೆ ಸಮಾಜದಲ್ಲಿ ಅವಿಶ್ವಾಸ ಮತ್ತು ಅಪನಂಬಿಕೆಯನ್ನು ಉಂಟು ಮಾಡಲು ಪ್ರಯತ್ನಿಸಿದ್ದಾರೆ. ಹರೀಶ ಪೂಂಜಾ ಅವರು ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಸಭೆಯಲ್ಲಿ ಮಾಡಿರುವ ಸುಳ್ಳು ಆರೋಪಗಳು ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ಸಂವಿಧಾನ ವಿರುದ್ಧವಾಗಿರುತ್ತದೆ. ಈ ಕಾರಣದಿಂದ ಶಾಸಕರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.
ದೂರು ನೀಡಿದ ನಿಯೋಗದಲ್ಲಿ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಕುಮಾರ್ ಜೋರಾ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಮೊದಲಾದವರು ಇದ್ದರು.
0 comments:
Post a Comment