ನಿರಂತರವಾಗಿ ಸುರಿದ ಮಳೆ ಹಿನ್ನಲೆ : ಮೀಸಲು ದಿನ (ಸೋಮವಾರ-ಮೇ29) ಕ್ಕೆ ಮುಂದೂಡಿದ ಐಪಿಎಲ್ ಫೈನಲ್ ಪಂದ್ಯ - Karavali Times ನಿರಂತರವಾಗಿ ಸುರಿದ ಮಳೆ ಹಿನ್ನಲೆ : ಮೀಸಲು ದಿನ (ಸೋಮವಾರ-ಮೇ29) ಕ್ಕೆ ಮುಂದೂಡಿದ ಐಪಿಎಲ್ ಫೈನಲ್ ಪಂದ್ಯ - Karavali Times

728x90

28 May 2023

ನಿರಂತರವಾಗಿ ಸುರಿದ ಮಳೆ ಹಿನ್ನಲೆ : ಮೀಸಲು ದಿನ (ಸೋಮವಾರ-ಮೇ29) ಕ್ಕೆ ಮುಂದೂಡಿದ ಐಪಿಎಲ್ ಫೈನಲ್ ಪಂದ್ಯ

ಮೀಸಲು ದಿನದಲ್ಲೂ ಪೂರ್ಣ ಪಂದ್ಯಕ್ಕೆ ಅವಕಾಶ ಸಿಗದಿದ್ದರೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ 


ಅಹಮದಾಬಾದ್, ಮೇ 29, 2023 (ಕರಾವಳಿ ಟೈಮ್ಸ್) : ನಿರಂತರವಾಗಿ ಸುರಿದ ಭಾರೀ ಮಳೆ ಮಧ್ಯ ರಾತ್ರಿಯಾದರೂ ನಿಲ್ಲುವ ಸೂಚನೆ ಕಾಣದ ಪರಿಣಾಮವಾಗಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 28) ಸಂಜೆ ನಡೆಯಬೇಕಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಸೋಮವಾರ (ಮೇ 29) ಕ್ಕೆ ಮುಂದೂಡಲಾಗಿದೆ. 

ಮೀಸಲು ದಿನವಾಗಿರುವ ಸೋಮವಾರ ನಿಗದಿತ ಸಮಯ 7.30ಕ್ಕೆ ಸರಿಯಾಗಿ ಫೈನಲ್ ಪಂದ್ಯ ಆರಂಭವಾಗಲಿದೆ. ಭಾನುವಾರ ಕನಿಷ್ಠ ಟಾಸ್ ಪ್ರಕ್ರಿಯೆಗೂ ಮಳೆ ಅವಕಾಶ ನೀಡಲಿಲ್ಲ. ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಸೋಮವಾರ ಅಹಮದಾಬಾದ್‍ನಲ್ಲಿ ಮಳೆಯ ಮುನ್ಸೂಚನೆ ಇರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ. 

ಭಾನುವಾರ ಸಂಜೆಯಿಂದಲೇ ಭಾರೀ ಮಳೆ ಸುರಿದ ಕಾರಣ ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಪ್ರೇಕ್ಷಕರು ಭಾರೀ ನಿರಾಸೆ ಅನುಭವಿಸಿದರು. ಮಧ್ಯರಾತ್ರಿವರೆಗೂ ಕಾಯಲಾಯಿತಾದರೂ ಮಳೆ ನಿಲ್ಲುವ ಸೂಚನೆ ಕಂಡು ಬರದ ಹಿನ್ನಲೆಯಲ್ಲಿ ಅಂತಿಮವಾಗಿ ಅಂಪೈರ್‍ಗಳು ಫೈನಲ್ ಪಂದ್ಯವನ್ನು ಮುಂದೂಡಿಕೆ ಮಾಡುವ ನಿರ್ಧಾರ ಕೈಗೊಂಡರು. 

ಪೂರ್ತಿ 20 ಓವರ್‍ಗಳ ಪಂದ್ಯಕ್ಕೆ ರಾತ್ರಿ 9.35ರ ಡೆಡ್ ಲೈನ್ ವಿಧಿಸಲಾಗಿತ್ತು. 9.45ಕ್ಕೆ ಆರಂಭಗೊಂಡರೆ 19 ಓವರ್ ಪಂದ್ಯ, 10 ಗಂಟೆಗೆ ಪ್ರಾರಂಭವಾದರೆ 17 ಓವರ್ ಪಂದ್ಯ, 10.15ಕ್ಕೆ ಆದರೆ 15 ಓವರ್‍ಗಳ ಪಂದ್ಯ ಎಂದು ತೀರ್ಮಾನಿಸಲಾಗಿತ್ತು. ತಲಾ 5 ಓವರ್‍ಗಳ ಪಂದ್ಯವಾದರೆ 12.06ರ ಅಂತಿಮ ಕಟ್ ಆಫ್ ಸಮಯವನ್ನು ನಿಗದಿಗೊಳಿಸಲಾಗಿತ್ತು. ಆದರೆ ನಿರಂತರ ಮಳೆಯ ಕಾರಣದಿಂದಾಗಿ ಕನಿಷ್ಠ ಐದು ಓವರ್ ಪಂದ್ಯ ನಡೆಸಲು ಕೂಡ ಪಿಚ್ ಸೂಕ್ತವಾಗಿರದ ಹಿನ್ನಲೆಯಲ್ಲಿ ರಾತ್ರಿ 10.50ರ ವೇಳೆ ಪಂದ್ಯವನ್ನು ಮುಂದೂಡಿಕೆ ಮಾಡುವ ನಿರ್ಧಾರವನ್ನು ಎರಡೂ ತಂಡಗಳ ಕೋಚ್‍ಗಳ ಸಮ್ಮುಖದಲ್ಲಿ ಅಂಪೈರ್‍ಗಳು ಪ್ರಕಟಿಸಿದರು. 

ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಬೇಕಾದಲ್ಲಿ ಕನಿಷ್ಠ 5 ಓವರ್‍ಗಳ ಪಂದ್ಯವಾದರೂ ನಡೆಯಬೇಕು. ಇಲ್ಲದೇ ಇದ್ದಲ್ಲಿ ಸೂಪರ್ ಓವರ್‍ನಲ್ಲಿಯಾದರೂ ಫಲಿತಾಂಶ ತಿಳಿಯಬೇಕು. 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾದಂತಾಗಿದೆ. 

ಫೈನಲ್ ಪಂದ್ಯದ ಮೀಸಲು ದಿನದಲ್ಲೂ ಒಂದೇ ಒಂದು ಎಸೆತ ಹಾಕಲು ಸಾಧ್ಯವಾಗದೇ ಇದ್ದಲ್ಲಿ, ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಎನಿಸಿಕೊಳ್ಳಲಿದೆ. ಕಾರಣ ಲೀಗ್ ಪಂದ್ಯಾವಳಿಯ ನಿಯಮದಂತೆ ಲೀಗ್ ಹಂತದಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಪ್ಲೇ ಆಫ್‍ಗೆ ಏರಿತ್ತು. ಗುಜರಾತ್ ಟೈಟಾನ್ಸ್ ಲೀಗ್ ಹಂತದಲ್ಲಿ ಅಡಿದ 14 ಪಂದ್ಯಗಳ ಪೈಕಿ 10 ರಲ್ಲಿ ಗೆಲುವು ಕಾಣುವ ಮೂಲಕ 20 ಅಂಕ ಸಂಪಾದನೆ ಮಾಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯದಲ್ಲಿ 8 ಗೆಲುವು ಕಾಣುವ ಮೂಲಕ 17 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಪ್ಲೇ ಆಫ್ ಹಂತಕ್ಕೇರಿತ್ತು. 

ಚೆನ್ನೈ ತಂಡದ ನಾಯಕ ಎಂ ಎಸ್ ಧೋನಿ ತಮ್ಮ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿಲ್ಲದಿದ್ದರೂ ಅವರು ಈಗಾಗಲೇ ಆಪ್ತ ವಲಯದಲ್ಲಿ ಇದೇ ತಮ್ಮ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಧೋನಿ ಅವರು ಈ ನಿರ್ಧಾರಕ್ಕೆ ಬರುವುದೇ ಆದರೆ ಅಚ್ಚರಿಯ ಬೆಳವಣಿಗೆಯೆಂದರೆ, ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟಿನ ಕೊನೆಯ ಪಂದ್ಯ ಕೂಡ ಮಳೆಯಿಂದಾಗಿ ಮೀಸಲು ದಿನದಲ್ಲಿ ಆಡಲಾಗಿತ್ತು ಎಂಬುದು ಗಮನಾರ್ಹ.

  • Blogger Comments
  • Facebook Comments

0 comments:

Post a Comment

Item Reviewed: ನಿರಂತರವಾಗಿ ಸುರಿದ ಮಳೆ ಹಿನ್ನಲೆ : ಮೀಸಲು ದಿನ (ಸೋಮವಾರ-ಮೇ29) ಕ್ಕೆ ಮುಂದೂಡಿದ ಐಪಿಎಲ್ ಫೈನಲ್ ಪಂದ್ಯ Rating: 5 Reviewed By: karavali Times
Scroll to Top