ಮಂಗಳೂರು, ಎಪ್ರಿಲ್ 27, 2023 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯಿಂದ ಜನನ-ಮರಣ ಪ್ರಮಾಣ ಪತ್ರಗಳು, ಶಾಲಾ-ಕಾಲೇಜುಗಳ ಅಂಕಪಟ್ಟಿ, ಪ್ರಮಾಣ ಪತ್ರಗಳ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಸೇವೆಯ ಬಳಿಕ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕ್ಫ್ ಇಲಾಖೆ ನೀಡುವ ಮುಸ್ಲಿಂ ಸಮುದಾಯದ ದಂಪತಿಗಳ ಮ್ಯಾರೇಜ್ ಸರ್ಟಿಫಿಕೇಟ್ ಗಳನ್ನು ಕೂಡಾ ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಆರಂಭಿಸಿದೆ.
ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಹಾಗೂ ಅಂಚೆ ಇಲಾಖೆಯ ಮಂಗಳೂರು ಹಿರಿಯ ಅಧೀಕ್ಷಕ ಶ್ರೀಹರ್ಷ ಎನ್ ಅವರು ಒಡಂಬಂಡಿಕೆ ಮಾಡಿಕೊಳ್ಳುವ ಮೂಲಕ ‘ಸ್ಪೀಡ್ ಪೋಸ್ಟ್ ಮೂಲಕ ಮುಸ್ಲಿಂ ಸಮುದಾಯದ ದಂಪತಿಗಳ ಮದುವೆ ಪ್ರಮಾಣ ಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುವ ವಿಶಿಷ್ಟಸೇವೆ’ಗೆ ಬುಧವಾರ (ಎಪ್ರಿಲ್ 26) ಚಾಲನೆ ನೀಡಿದರು.
ಈ ಉಪಕ್ರಮದೊಂದಿಗೆ, ಕರ್ನಾಟಕದಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿಯ ಮೂಲಕ ವಿತರಿಸಲಾಗುವ ಮದುವೆ ಪ್ರಮಾಣ ಪತ್ರಗಳನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯದ ದಂಪತಿಗಳ ಮದುವೆ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿದಾರರು ಎರಡು ಬಾರಿ ಮಂಗಳೂರಿನ ಜಿಲ್ಲಾ ವಕ್ಫ್ ಕಛೇರಿಗೆ ಭೇಟಿ ನೀಡಬೇಕಾಗಿದೆ. ಈ ವ್ಯವಸ್ಥೆಯಲ್ಲಿ ದೂರದ ಸ್ಥಳಗಳಿಂದ ಬರುವ ಸಾರ್ವಜನಿಕರು ಮದುವೆ ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಒಡಂಬಂಡಿಕೆಯನ್ನು ಮಾಡಿಕೊಂಡಿದ್ದು ಈ ಸೇವೆಯ ಅಡಿಯಲ್ಲಿ ಮದುವೆ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರಿಗೆ 2 ಆಯ್ಕೆಗಳನ್ನು ನೀಡಲಾಗುತ್ತದೆ.
ಅರ್ಜಿದಾರರು ಖುದ್ದಾಗಿ ದ ಕ ಜಿಲ್ಲಾ ವಕ್ಫ್ ಕಛೇರಿಗೆ ಮತ್ತೊಮ್ಮೆ ಭೇಟಿ ನೀಡಿ ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಅಥವಾ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಪ್ರಮಾಣ ಪತ್ರವನ್ನು ತಮ್ಮ ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು.
ಗ್ರಾಹಕರ ಆಯ್ಕೆಯು ಕ್ರ ಸಂ 2 ಆಗಿದ್ದಲ್ಲಿ, ಮದುವೆ ಪ್ರಮಾಣ ಪತ್ರದ ಅರ್ಜಿಯಲ್ಲಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಪಡೆದುಕೊಳ್ಳುವ ಆಯ್ಕೆಗೆ ಟಿಕ್ ಮಾಡಿ ಅರ್ಜಿಯನ್ನು ಕೌಂಟರ್ ನಲ್ಲಿ ನೀಡಬೇಕು. ಈ ಪ್ರಮಾಣ ಪತ್ರದ ಅರ್ಜಿಯಲ್ಲಿ, ಬಟವಾಡೆಯಾಗಬೇಕಾಗಿರುವ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು ಹಾಗೂ 80/- ರೂಪಾಯಿ ಶುಲ್ಕವನ್ನು ಬಟವಾಡೆ ಮಾಡುವ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಕೈಯಲ್ಲಿ ನೀಡಲು ತಮ್ಮ ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣ ಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ಬಟವಾಡೆ ಮಾಡುವುದು.
ಈ ಸೇವೆಯು ಕಡ್ಡಾಯವಾಗಿರದೆ, ಸಂಪೂರ್ಣವಾಗಿ ಐಚ್ಭಿಕವಾಗಿದೆ. ಈ ಪ್ರಮಾಣ ಪತ್ರವನ್ನು ಭಾರತದ ಯಾವುದೇ ಊರಿಗೂ ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು. ಪ್ರಮಾಣ ಪತ್ರವನ್ನು ಯಾವುದೇ ಊರಿಗೂ ಸ್ಫೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಿಸಲು ನಿಗದಿಪಡಿಸಿದ ಶುಲ್ಕ ಕೇವಲ ರೂ. 80/-. ಬಟವಾಡೆಯಾಗಬೇಕಾಗಿರುವ ವಿಳಾಸವು ಪ್ರಮಾಣ ಪತ್ರದ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು. ಅರ್ಜಿದಾರರು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು. ಅರ್ಜಿದಾರರ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು. ದ ಕ ಜಿಲ್ಲಾ ವಕ್ಫ್ ಕಛೇರಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಪ್ರಮಾಣ ಪತ್ರವು ಮುದ್ರಣಗೊಂಡು ನಂತರ ಅದನ್ನು 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು. ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ಅರ್ಜಿದಾರರಿಗೆ ಎಸ್ ಎಂ ಎಸ್ ಮೂಲಕ ಮಾಹಿತಿ ನೀಡಲಾಗುವುದು. ಈ ಸೇವೆಯನ್ನು ಪಡೆಯಲು ದ ಕ ಜಿಲ್ಲಾ ವಕ್ಫ್ ಕಛೇರಿ ಕೌಂಟರ್ ನಲ್ಲಿ ಯಾವುದೇ ಶುಲ್ಕ ಭರಿಸಬೇಕಾಗಿಲ್ಲ. ಸ್ಪೀಡ್ ಪೋಸ್ಟ್ ವಿತರಣೆಯ ಸಂಧರ್ಭದಲ್ಲಿ, ಪೋಸ್ಟ್ ಮ್ಯಾನ್ ಮೂಲಕ ರೂ. 80/- ನಿಗದಿತ ಶುಲ್ಕವನ್ನು ಅಂಚೆ ಕಚೇರಿಗೆ ಪಾವತಿಸಬೇಕು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment