ಬಂಟ್ವಾಳ, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ಜನಾರ್ದನ ಪೂಜಾರಿ ಅವರು ಕೇವಲ ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ, ಬದಲಾಗಿ ದೇಶದ ಅದರಲ್ಲೂ ಕರಾವಳಿ ಕರ್ನಾಟಕ ಮಾದರಿ ರಾಜಕಾರಣಿ, ಅಭಿವೃದ್ದಿಯ ರೂವಾರಿಯಾಗಿದ್ದಾರೆ. ಅಂತಹ ಅಮೂಲ್ಯ ರತ್ನವನ್ನು ಸಾಕಷ್ಟು ಅಪಪ್ರಚಾರ ನಡೆಸಿ ಸತತವಾಗಿ ಸೋಲುವಂತೆ ಮಾಡಿದ ಬಿಜೆಪಿಗರು ಇದೀಗ ಅವರ ವಾರ್ದಕ್ಯದ ಸಂದರ್ಭದಲ್ಲಿ ಅನುಕಂಪ ತೋರುತ್ತಿರುವುದು ಹಾಸ್ಯಾಸ್ಪದವಲ್ಲದೆ ಇನ್ನೇನು ಎಂದು ಮಾಜಿ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಪ್ರಶ್ನಿಸಿದರು.
ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರನ್ನು ಬುಧವಾರ ಬೆಳಿಗ್ಗೆ ಅವರ ಬಂಟ್ವಾಳದ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ, ಕರಾವಳಿ ಭಾಗದ ಅಭಿವೃದ್ದಿಗೆ ವಿಶೇಷ ಕೊಡುಗೆ ನೀಡಿದ ಜನಾರ್ದನ ಪೂಜಾರಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಮನೆಗೆ ಬಂದಿದ್ದೇನೆ ಎಂದರು.
ಆರಂಭದಲ್ಲಿ ಪಕ್ಷದ ಪರವಾಗಿ ಎಂಎಲ್‍ಎ ಟಿಕೆಟ್ ದೊರೆಯಲು ಜನಾರ್ದನ ಪೂಜಾರಿ ಅವರೇ ಮುಖ್ಯ ಕಾರಣವಾಗಿದ್ದು, ರಾಜಕೀಯ ಉನ್ನತಿಯ ಸಂದರ್ಭ ಪೂಜಾರಿ ಅವರ ಸದಾ ಬೆಂಬಲದ ಸಹಕಾರವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೂಜಾರಿ ಅವರ ಆಶಿರ್ವಾದ ಪಡೆಯುವುದು ಹಾಗೂ ಆರೋಗ್ಯ ವಿಚಾರಣೆ ಮಾಡುವುದು ನನ್ನ ಪಾಲಿನ ಕರ್ತವ್ಯ ಎಂದುಕೊಂಡು ಪೂಜಾರಿ ಅವರ ಮನೆಗೆ ಬಂದಿದ್ದೇನೆ ಎಂದ ಖಾದರ್ ಪೂಜಾರಿ ಅವರ ಆಶೀರ್ವಾದವೇ ನನಗೆ ಸದಾ ಸ್ಪೂರ್ತಿಯಾಗಿದೆ ಎಂದರು.
ಜಿಲ್ಲೆಯ ಇನ್ನೊಬ್ಬ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಕೂಡಾ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದು, ಇಂದು ಅವರು ನಮ್ಮೊಂದಿಗಿಲ್ಲ. ಆದರೆ ಅವರನ್ನು ಸ್ಮರಿಸುವುದು ಕೂಡಾ ನಮ್ಮೆಲ್ಲರ ಕರ್ತವ್ಯ ಎಂದ ಯು ಟಿ ಖಾದರ್ ರಾಜಕೀಯದಲ್ಲಿ ಸಿಕ್ಕಿದ ಅವಕಾಶದಲ್ಲಿ ಜನಪರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಅಧಿಕಾರಕ್ಕೇರಿದ ಬಳಿಕ ಪಕ್ಷ, ಸಂಘಟನೆ, ಜಾತಿ, ಮತ ಬೇಧವಿಲ್ಲದೆ, ಮನುಷ್ಯರ ಜೊತೆ ಯಾವುದೇ ದ್ವೇಷವಿಲ್ಲದೆ ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಬೇರೆ ಪಕ್ಷದ ಬಗ್ಗೆ ನಾವು ಯಾವತ್ತೂ ತಲೆಕೆಡಿಸುವುದಿಲ್ಲ. ನಮ್ಮದೇನಿದ್ದರೂ ನೀತಿ-ನಿಯ್ಯತ್ತಿನ ರಾಜಕಾರಣವಾಗಿದ್ದು, ಇನ್ನೊಬ್ಬರನ್ನು ಹೀಯಾಳಿಸಿ, ಅಪಮಾನಿಸಿ, ಕೀಳಾಗಿ ಕಾಣುವ ರಾಜಕೀಯವಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಇದೇ ವೇಳೆ ಉತ್ತರಿಸಿದರು.
ಇದೇ ವೇಳೆ ಯು ಟಿ ಖಾದರ್ ಅವರನ್ನು ಆಶೀರ್ವದಿಸಿದ ಜನಾರ್ದನ ಪೂಜಾರಿ ಕಾಂಗ್ರೆಸ್ ಕಾರ್ಯಕರ್ತರು ಒಂದೇ ಕುಟುಂಬದ ಸದಸ್ಯರು, ಅವರಿಗೆ ಕಿಂಚಿತ್ತೂ ನೋವಾಗದ ರೀತಿಯಲ್ಲಿ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ನೋವು-ನಲಿವುಗಳಿಗೆ ಸದಾ ಜೊತೆ ನಿಂತು ಪ್ರೋತ್ಸಾಹ ನೀಡಬೇಕು ಎಂದು ಕಿವಿ ಮಾತು ಹೇಳಿದರಲ್ಲದೆ ಮುಂದಿನ ಚುನಾವಣೆಯಲ್ಲಿ ಬಹುಮತದ ಗೆಲುವು ನಿಮ್ಮದಾಗಲಿ ಎಂದು ಹರಸಿದರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಮುಖರಾದ ಚಂದ್ರಹಾಸ ಕರ್ಕೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮ್ಮರ್ ಫಾರೂಕ್ ಫರಂಗಿಪೇಟೆ, ರಮ್ಲಾನ್ ಮಾರಿಪಳ್ಳ, ಈಶ್ವರ ಉಳ್ಳಾಲ್, ಎನ್ ಎಸ್ ಅಬ್ದುಲ್ ಕರೀಂ, ಅಬ್ದುಲ್ ರಝಾಕ್ ಕುಕ್ಕಾಜೆ, ಅಬ್ದುಲ್ ಜಲೀಲ್ ಬ್ರೈಟ್, ಪ್ರವೀಣ್ ಆಳ್ವ, ಬಿ ಎಂ ಅಬ್ಬಾಸ್ ಅಲಿ, ಮುಹಮ್ಮದ್ ಮೋನು, ದೇವದಾಸ ಭಂಡಾರಿ, ಇಬ್ರಾಹಿಂ ಕೈಲಾರ್, ದೀಪಕ್ ಪಿಲಾರ್, ನಾಸಿರ್ ನಡುಪದವು, ದೇವಣ್ಣ ಶೆಟ್ಟಿ, ದೇವದಾಸ ಭಂಡಾರಿ, ಸುರೇಶ ಭಟ್ ನಗರ, ಇಕ್ಬಾಲ್ ಸುಜೀರ್, ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment