ಬಂಟ್ವಾಳ, ಎಪ್ರಿಲ್ 30, 2023 (ಕರಾವಳಿ ಟೈಮ್ಸ್) : ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಜಾತ್ಯತೀತ ಪರಂಪರೆಯನ್ನು ಉಳಿಸಿ ಬೆಳೆಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬಿ ಸಿ ರೋಡಿನ ಹಿರಿಯ ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ರೈ ಕರೆ ನೀಡಿದರು.
ತುಂಬೆ ಗ್ರಾಮದ ರಾಮಲ್ ಕಟ್ಟೆ ಸಮೀಪದ ವಳವೂರಿನಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು ಅವರ ನಿವಾಸದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯು ಟಿ ಖಾದರ್ ಅವರು ಕಾಂಗ್ರೆಸ್ ಪಕ್ಷ ಓರ್ವ ಸಮರ್ಥ ಸೇನಾನಿಯಾಗಿದ್ದು, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಕ್ಷೇತ್ರದ ಜನರನ್ನೂ ಕೂಡಾ ಸಮಾನವಾಗಿ ವಿಶ್ವಾಸಕ್ಕೆ ಪಡೆದುಕೊಂಡು ಜನಪರವಾಗಿ ಕಾರ್ಯನಿರ್ವಹಿಸುವ ಉತ್ತಮ ರಾಜಕೀಯ ಪಟುವಾಗಿದ್ದು, ಅವರನ್ನು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದಿಂದ ಚುನಾಯಿಸಿ ಕ್ಷೇತ್ರ ಅಭಿಮಾನವನ್ನು ಹೆಚ್ಚಿಸುವಂತೆ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅವರು ಕರೆ ನೀಡಿದರು.
ಖಾದರ್ ಅವರಂತಹ ಹೃದಯ ವೈಶಾಲ್ಯ ಹೊಂದಿರುವ, ಎಲ್ಲರನ್ನೂ ನೆಚ್ಚಿಕೊಳ್ಳುವ ಜನನಾಯಕ ಇಂದಿನ ಸಮಾಜಕ್ಕೆ ಅತೀ ಅಗತ್ಯವಾಗಿದ್ದು, ಇಂತಹ ನಾಯಕರನ್ನು ನಾವೆಲ್ಲ ಉಳಿಸಿಕೊಳ್ಳಬೇಕು. ಬಡವರ ಪರವಾಗಿ, ಜನಪರವಾಗಿ ಮುನ್ನಡೆಯುತ್ತಿರುವ ಯು ಟಿ ಖಾದರ್ ಅವರನ್ನು ಗೆಲ್ಲಿಸಿ ಮತ್ತೆ ಸಚಿವರಾಗಿ ಕ್ಷೇತ್ರದ ಜನರ ಸೇವೆಗೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ಅಶ್ವನಿ ಕುಮಾರ್ ಮನವಿ ಮಾಡಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ತುಂಬೆ ಗ್ರಾ ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು ಸಹಿತ ಪಕ್ಷದ ಪ್ರಮುಖರು ಕಾರ್ಯಕರ್ತರು ಸಾರ್ವಜನಿಕ ಮತದಾರ ಬಂಧುಗಳು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment