ಪರಿಶಿಷ್ಟರಿಗೆ ನ್ಯಾಯ ದೊರಕಿಸಲು ರಮಾನಾಥ ರೈಯಿಂದ ಮಾತ್ರ ಸಾಧ್ಯ, ಪರಿಶಿಷ್ಟರನ್ನು ಒಗ್ಗೂಡಿಸಲು ನಾಳೆ (ಎಪ್ರಿಲ್ 9) ಬಿ.ಸಿ.ರೋಡಿನಲ್ಲಿ ಐಕ್ಯತಾ ಸಮಾವೇಶ
ಬಂಟ್ವಾಳ, ಎಪ್ರಿಲ್ 08, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಅಂಬೇಡ್ಕರ್ ಭವನ ಸಹಿತ ಪರಿಶಿಷ್ಟ ಜಾತಿ-ಪಂಗಡಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು, ಕ್ಷೇತ್ರದ ಶಾಸಕರ ವೈಫಲ್ಯತೆಯೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಎಸ್ಟಿ-ಎಸ್ಸಿ ಸಮುದಾಯದ ಹಿತ ಕಾಪಾಡಲು ಕಾಂಗ್ರೆಸ್ ಜನಪ್ರತಿನಿಧಿಯಿಂದ ಮಾತ್ರ ಸಾಧ್ಯ ಎಂಬ ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಬೆಂಬಲಿಸಲು ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ನೇತೃತ್ವದಲ್ಲಿ ಐಕ್ಯತಾ ಸಮಾವೇಶವು ಎಪ್ರಿಲ್ 9 ರಂದು ಭಾನುವಾರ ಬೆಳಿಗ್ಗೆ ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಪುರಸಭಾ ಸದಸ್ಯ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಹೇಳಿದರು.
ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಉದ್ಘಾಟಿಸುವರು. ಮಾಜಿ ಸಚಿವ, ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಅವರು ಭವಿಷ್ಯತ್ತಿನ ಬಂಟ್ವಾಳಕ್ಕಾಗಿ ಈ ಪರಿಶಿಷ್ಟರ ಐಕ್ಯತಾ ಸಮಾವೇಶ ಏರ್ಪಡಿಸಲಾಗಿದೆ. ಮೀಸಲಾತಿ ಎಂಬುದು ಪರಿಶಿಷ್ಟರ ಭಿಕ್ಷೆಯಲ್ಲ, ಅದು ಹಕ್ಕು ಎಂಬ ನೆಲೆಯಲ್ಲಿ ಈ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಜಾರಿ ಮಾಡಹೊರಟಿಡುವ ಮೀಸಲಾತಿಯಿಂದ ಜಿಲ್ಲೆಯ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಪರಿಶಿಷ್ಟ ಪಂಗಡ ಕಾಂಗ್ರೆಸ್ ವಿಭಾಗದ ಪ್ರಮುಖರಾದ ನಾರಾಯಣ ನಾಯ್ಕ್, ಅಣ್ಣು ಖಂಡಿಗ, ಚಂದ್ರಹಾಸ ನಾಯ್ಕ್, ಪ್ರೀತಂರಾಜ್ ದ್ರಾವಿಡ್ ಮೊದಲಾದವರು ಈ ಸಂದರ್ಭದಲ್ಲಿದ್ದರು.
0 comments:
Post a Comment