ಬಂಟ್ವಾಳ, ಎಪ್ರಿಲ್ 18, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ, ಬಂಟ್ವಾಳ ಕ್ಷೇತ್ರದ ಮತದಾರನಾಗಿ 9ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಚುನಾವಣೆ ಎದುರಿಸುವುದಕ್ಕಾಗಿ ಅಥವಾ ಅಧಿಕಾರಕ್ಕಾಗಿ ಕ್ಷೇತ್ರ ಹಡುಕಿಕೊಂಡು ಹೋಗಿಲ್ಲ, ನನ್ನ ಮತ ಇರದ ಕ್ಷೇತ್ರದಲ್ಲಿ ಟಿಕೆಟಿಗಾಗಿ ಪೈಪೋಟಿಯನ್ನೂ ನಡೆಸಿಲ್ಲ. ನನ್ನ ಮತ ಸಹಿತ ನನ್ನ ಕ್ಷೇತ್ರದ ಮತದಾರರ ಆಶಿರ್ವಾದದಿಂದಲೇ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಮಾತ್ರವಲ್ಲ ಮೂರು ಬಾರಿ ಮಂತ್ರಿಯಾಗಿಯೂ ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ ಎಂದು ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ ರಮಾನಾಥ ರೈ ಹೇಳಿದರು.
ಸೋಮವಾರ ಅಪರಾಹ್ನ ಬಿ ಸಿ ರೋಡಿನ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನನ್ನ ಶಾಸಕತ್ವದ ಅವಧಿಯ ಅಭಿವೃದ್ದಿ ಕಾರ್ಯಗಳನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಅದರಲ್ಲೂ ಪತ್ರಕರ್ತ ಮಿತ್ರರಿಗೆ ಎಲ್ಲಾ ಅಭಿವೃದ್ದಿ ಕಾರ್ಯಗಳ ಬಗ್ಗೆ ಪೂರ್ಣ ಅರಿವಿದೆ. ಶಾಸಕತ್ವದ ಅವಧಿಯಲ್ಲಿ ಅಭಿವೃದ್ದಿ ಬಿಟ್ಟು ಇನ್ನಿತರ ಆಭಾಸಕರ ವಿಷಯಗಳ ಚಿಂತನೆ ನಡೆಸಿದ್ದೇ ಇಲ್ಲ. ಅಭಿವೃದ್ದಿಯನ್ನೇ ಮೂಲಮಂತ್ರವಾಗಿಸಿಕೊಂಡು ಕ್ಷೇತ್ರದ ಜನ ಹಿತವನ್ನು ನಿರಂತರವಾಗಿ ಕಾಯುತ್ತಾ ಬಂದಿದ್ದೇನೆ ಎಂದರು.
ನನ್ನ ಆರು ಬಾರಿಯ ಶಾಸಕತ್ವದ ಅವಧಿಯಲ್ಲಿ ತಾಲೂಕಿನ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಪೇಟೆಗೆ ನಾನು ಶಾಸಕನಾಗಿದ್ದು ಕೇವಲ 2 ಬಾರಿ ಮಾತ್ರ. ಅದರಲ್ಲೂ ಒಂದು ಬಾರಿ ವಿರೋಧ ಪಕ್ಷದ ಶಾಸಕನಾಗಿದ್ದೆ. ಆರಂಭದಲ್ಲಿ ಬಿ ಸಿ ರೋಡು ಪೇಟೆ ವಿಟ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿತ್ತು. ಆದರೂ ನನ್ನ ಎರಡು ಬಾರಿ ಅವಧಿಯ ಶಾಸಕತ್ವದಲ್ಲಿ ನಡೆದ ಅಭಿವೃದ್ದಿ ಮಾತ್ರ ಬಿ ಸಿ ರೋಡು ಪೇಟೆಯಲ್ಲಿ ಕಂಡು ಬರುತ್ತಿದೆ ವಿನಃ ಇತರ ಪಕ್ಷದ ಶಾಸಕರ ಯಾವುದೇ ಕೊಡುಗೆಗಳೂ ಕಾಣುವುದಿಲ್ಲ. ಬಿ ಸಿ ರೋಡು ಪೇಟೆಯ ಮಧ್ಯದಲ್ಲಿ ನಿಂತು ಒಮ್ಮೆ ಕಣ್ಣು ತಿರುಗಿಸಿದರೆ ಇದೆಲ್ಲವೂ ಅರಿವಿಗೆ ಬರುತ್ತದೆ ಎಂದ ರಮಾನಾಥ ರೈ ನನ್ನ ಅವಧಿಯಲ್ಲಿ ಬಿ ಸಿ ರೋಡು ಪೇಟೆಯಲ್ಲಿ ಸುಂದರ ಮಿನಿ ವಿಧಾನಸೌಧ, ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ, ಸುಸಜ್ಜಿತ ಮೆಸ್ಕಾಂ ಇಲಾಖಾ ಕಟ್ಟಡ, ಅಂಬೇಡ್ಕರ್ ಭವನ, ಬಿ ಸಿ ರೋಡು ವೃತ್ತದ ಬಳಿ ಡಂಪಿಂಗ್ ಯಾರ್ಡ್ ಆಗಿದ್ದ ಸ್ಥಳದಲ್ಲಿ ಸುಂದರ ಮಿನಿ ಉದ್ಯಾನವನ, ತಲಪಾಡಿಯಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ, ಬಿ ಸಿ ರೋಡು-ಪೂಂಜಾಲಕಟ್ಟೆ ಹೆದ್ದಾರಿ ಚತುಷ್ಪಥ ಕಾಮಗಾರಿ, ಬಿ ಸಿ ರೋಡು-ಮಾರ್ನಬೈಲು ರಸ್ತೆ, ಬಂಟ್ವಾಳದಲ್ಲಿ ಸುಸಜ್ಜಿತ ನಿರೀಕ್ಷಣಾ ಮಂದಿರ ಕಟ್ಟಡ, ಸಾಲು ಮರ ತಿಮ್ಮಕ್ಕ ವೃಕ್ಷ ಉದ್ಯಾನವನ, ಪಂಜೆ ಮಂಗೇಶರಾಯರ ಭವನ, ಮೆಲ್ಕಾರಿನಲ್ಲಿ ಎ ಆರ್ ಟಿ ಒ ಕಚೇರಿ, ಬಂಟ್ವಾಳ ಪುರಸಭಾ ವ್ಯಾಪ್ತಿಯ 90 ಶೇಕಡಾ ರಸ್ತೆಗಳ ಕಾಂಕ್ರಿಟೀಕರಣ ಹಾಗೂ ಡಾಮರೀಕರಣ, ಒಳಚರಂಡಿ ಯೋಜನೆ, ಸಮಗ್ರ ಕುಡಿಯುವ ನೀರಿನ ಯೋಜನೆ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹು ನಿರೀಕ್ಷಿತ ಹಾಗೂ ದೀರ್ಘದೃಷ್ಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇವೆಲ್ಲವೂ ನನ್ನ ಅವಧಿಯ ಮಹತ್ವಾಕಾಂಕ್ಷಿ ಅಭಿವೃದ್ದಿ ಯೋಜನೆಗಳ ಕೆಲವೊಂದು ಝಲಕ್ ಗಳು ಎಂದವರು ವಿವರಿಸಿದರು.
ನನ್ನ ಅವಧಿಯ ಕೆಲವೊಂದು ಕಾಮಗಾರಿಗಳನ್ನು ಆರಂಭ ಮಾಡಿದಲ್ಲಿಯೇ ನೆನೆಗುದಿಗೆ ಬಿದ್ದಿದ್ದು, ಪ್ರಮುಖವಾಗಿ ಅಂಬೇಡ್ಕರ್ ಭವನ, ಪಂಜೆ ಮಂಗೇಶರಾಯನ ಭವನ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಮಗ್ರ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ ಮೊದಲಾದವುಗಳನ್ನು ಪೂರ್ಣಗೊಳಿಸಿ ಪೂರ್ಣವಾಗಿ ಜನರ ಉಪಯೋಗಕ್ಕೆ ಅರ್ಪಣೆ ಮಾಡುವ ಮಹದಾಸೆ ಇದ್ದು, ಕೊನೆಯ ಬಾರಿಗೆ ಇನ್ನೊಂದು ಅವಕಾಶ ಕ್ಷೇತ್ರ ಜನ ನೀಡಿದರೆ ಅವುಗಳೆಲ್ಲವನ್ನು ಅತ್ಯಂತ ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇನೆ. ಈ ನಿಟ್ಟಿನಲ್ಲಿ ನನ್ನ ಮೇಲೆ ಅತೀವ ಪ್ರೀತಿ ಇಟ್ಟಿರುವ ಮತದಾರ ಬಂಧುಗಳು ಈ ಬಾರಿ ನನ್ನನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ನನಗೆ 9ನೇ ಬಾರಿಗೆ ಅವಕಾಶ ನೀಡಿದ್ದು, ಈ ಬಾರಿ ಎಪ್ರಿಲ್ 20ರ ಗುರುವಾರ ಮಧ್ಯಾಹ್ನ 12.35ಕ್ಕೆ ಬಿ ಸಿ ರೋಡಿನ ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಬೆಳಿಗ್ಗೆ 9 ಗಂಟೆಯಿಂದ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನಾ ವಿಧಿ ನೆರವೇರಿಸಿ ಬಳಿಕ ಪಾದಯಾತ್ರೆಯಲ್ಲಿ ಸಾಗಿ ಬಂದು ನಾಮಪತ್ರ ಸಲ್ಲಿಸಲಿದ್ದೇನೆ. ಈ ಸಂದರ್ಭ ನನ್ನೊಂದಿಗೆ ಎಲ್ಲಾ ರೀತಿಯಲ್ಲೂ ಸಂಪರ್ಕ ಹೊಂದಿರುವ ಸರ್ವ ಜನಾಂಗದ ಬಂಧುಗಳು ನಾಮಪತ್ರ ಸಲ್ಲಿಸುವ ಸಂದರ್ಭ ಭಾಗಿಗಳಾಗಿ ಆಶಿರ್ವದಿಸುವಂತೆ ಇದೇ ವೇಳೆ ರಮಾನಾಥ ರೈ ಆಹ್ವಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜನಾರ್ದನ ಚೆಂಡ್ತಿಮಾರ್, ಬಿ ವಾಸು ಪೂಜಾರಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಚುನಾವಣಾ ಏಜೆಂಟ್ ಸುರೇಶ್ ಕುಮಾರ್ ನಾವೂರು, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಕಾರ್ಮಿಕ ಘಟಕದ ಉಮೇಶ್ ನೆಲ್ಲಿಗುಡ್ಡೆ, ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ತಾ ಪಂ ಮಾಜಿ ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರಿ, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಕುಳಾಲು, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment