ಕಾಂಗ್ರೆಸ್ ಸರಕಾರ ರಚನೆಯಾಗಿ ಗಂಟೆಯೊಳಗೆ ಪಕ್ಷ ನೀಡಿದ ಗ್ಯಾರಂಟಿಗಳ ಜಾರಿ ಗ್ಯಾರಂಟಿ : ರಾಹುಲ್ ಗಾಂಧಿ ಭರವಸೆ - Karavali Times ಕಾಂಗ್ರೆಸ್ ಸರಕಾರ ರಚನೆಯಾಗಿ ಗಂಟೆಯೊಳಗೆ ಪಕ್ಷ ನೀಡಿದ ಗ್ಯಾರಂಟಿಗಳ ಜಾರಿ ಗ್ಯಾರಂಟಿ : ರಾಹುಲ್ ಗಾಂಧಿ ಭರವಸೆ - Karavali Times

728x90

27 April 2023

ಕಾಂಗ್ರೆಸ್ ಸರಕಾರ ರಚನೆಯಾಗಿ ಗಂಟೆಯೊಳಗೆ ಪಕ್ಷ ನೀಡಿದ ಗ್ಯಾರಂಟಿಗಳ ಜಾರಿ ಗ್ಯಾರಂಟಿ : ರಾಹುಲ್ ಗಾಂಧಿ ಭರವಸೆ

ರಾಜ್ಯಾದ್ಯಂತ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ : ರಾಹುಲ್ ಗಾಂಧಿಯಿಂದ 5ನೇ ಗ್ಯಾರಂಟಿ ಘೋಷಣೆ 


ಮಂಗಳೂರು, ಎಪ್ರಿಲ್ 28, 2023 (ಕರಾವಳಿ ಟೈಮ್ಸ್) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಅಭೂತಪೂರ್ವ ಕೊಡುಗೆಗಳನ್ನು ಗ್ಯಾರಂಟಿ ಹೆಸರಿನಲ್ಲಿ ಘೋಷಿಸುತ್ತಿದ್ದು, ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ನೀಡಿ ಜನರ ಮನಗೆದ್ದಿರುವ ಕಾಂಗ್ರೆಸ್ ಪಕ್ಷ ಇದೀಗ ಗುರುವಾರ ಮಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು 5ನೇ ಗ್ಯಾರಂಟಿಯೊಂದನ್ನು ಘೋಷಿಸಿ ಮತ್ತೆ ಮಹಿಳೆಯರನ್ನು ತೃಪ್ತಿಪಡಿಸುವ ಪ್ರಯತ್ನ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಮರುಕ್ಷಣದಲ್ಲೇ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವುದಾಗಿ ರಾಹುಲ್ ಗಾಂಧಿ ಮಂಗಳೂರು ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ. 

ಈಗಾಗಲೇ ಕಾಂಗ್ರೆಸ್ ಪಕ್ಷ  200 ಯುನಿಟ್ ಉಚಿತ ವಿದ್ಯುತ್ ಕೊಡುಗೆಯ ಗೃಹಜ್ಯೋತಿ, ಪ್ರತಿ ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನ ಕೊಡುಗೆಯ ಗೃಹಲಕ್ಷ್ಮಿ, ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿಯ ಅನ್ನಭಾಗ್ಯ, ಪದವೀಧರ ಹಾಗೂ ಡಿಪ್ಲೋಮಾ ಪದವೀಧರ ನಿರುದ್ಯೋಗಿ ವಿದ್ಯಾವಂತರಿಗೆ ಪ್ರತಿ ತಿಂಗಳು ತಲಾ 3 ಸಾವಿರ ಹಾಗೂ ಒಂದೂವರೆ ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಕೊಡುಗೆಯ ಯುವ ನಿಧಿ ಯೋಜನೆಗಳ 4 ಗ್ಯಾರಂಟಿಗಳನ್ನು ಘೊಷಿಸಿದ್ದು, ಇದೀಗ ರಾಹುಲ್ ಗಾಂಧಿ 5ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ. ಮಂಗಳೂರು ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಈ ಘೋಷಣೆ ಮಾಡಿದ್ದಾರೆ.

ಸಾರ್ವಜನಿಕ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದಾಗಿ ಅವರು ತಿಳಿಸಿದ್ದು, ಕಾಂಗ್ರೆಸ್ ಪಕ್ಷ ಘೋಷಿಸಿದ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂದವರು ಭರವಸೆ ನೀಡಿದರು. 

ಇದೇ ಪ್ರಧಾನಿ ಮೋದಿಗೆ ಸವಾಲು ಹಾಕಿದ ರಾಹುಲ್ ಗಾಂಧಿ, ಮೊದಿ ಅವರೇ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳುವ ನೀವು ನಮ್ಮ ಸರಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಅಧಿಕಾರಕ್ಕೆ ಬಂದು ಒಂದು ಗಂಟೆಯೊಳಗೆ ನಾವು ಘೋಷಿಸಿದ ಗ್ಯಾರಂಟಿಗಳ ಜಾರಿ ಮಾಡುವುದು ಗ್ಯಾರಂಟಿ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದ ಜನರಿಗೆ ಈ ಎಲ್ಲಾ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ ಎಂದು ಸವಾಲು ಹಾಕಿದ್ದಾರೆ. 

ಉಡುಪಿಯಲ್ಲಿ ರಾಹುಲ್ ಮೀನುಗಾರರೊಂದಿಗೆ ಸಂವಾದ : 1 ಲಕ್ಷ ಜೀವವಿಮೆ ಭರವಸೆ

ಉಡುಪಿ ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿ ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ಎಂಬಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ಮೀನುಗಾರರಿಗೆ ಕೊಡುಗೆ ಘೋಷಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಮತ್ತು 25 ರೂಪಾಯಿ ಸಬ್ಸಿಡಿಯೊಂದಿಗೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ ಎಂದು ಭರವಸೆ ನೀಡಿದರು. 

ಮೀನುಗಾರರೊಂದಿಗೆ ಸಮಸ್ಯೆಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಮೀನುಗಾರರ ಅಗತ್ಯತೆಗಳ ಬಗ್ಗೆ ಕಾಂಗ್ರೆಸ್ ಸರಕಾರ ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ನಿಮ್ಮ ಹಿತಾಸಕ್ತಿಗಳನ್ನು ನಾವು ರಕ್ಷಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಜನರು ಆರಿಸಿದ ಸರಕಾರವಲ್ಲ. ನೀವು ಆರಿಸಿದ ಸರಕಾರವಲ್ಲ. ಕಳ್ಳತನದಿಂದ ರಚನೆಯಾದ ಸರಕಾರ ಇದಾಗಿದೆ ಎಂದು ಹೇಳಿದ ಅವರು, ಬಡವರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು. 

ಇಡೀ ಕರ್ನಾಟಕ ರಾಜ್ಯದ ಜನರಿಗೆ ಈ ಸರಕಾರ ಕಳ್ಳತನದಿಂದ ರಚನೆಯಾಗಿದೆ ಎಂಬುದು ಗೊತ್ತಿದೆ, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಶಾಸಕರನ್ನು ಖರೀದಿ ಮಾಡಿ ಸರಕಾರ ರಚಿಸಿದ್ದು ತಮಗೆಲ್ಲಾ ಗೊತ್ತಿದೆ. ಬಿಜೆಪಿಯಲ್ಲಿ ಸಿಎಂ ಆಗಬೇಕಿದ್ದರೆ 2.5 ಸಾವಿರ ಕೋಟಿ ರೂಪಾಯಿ ಕೊಡಬೇಕು ಎಂದು ಬಿಜೆಪಿಯ ಎಂಎಲ್‍ಎ ಹೇಳಿದ್ದಾರೆ. ಗುತ್ತಿಗೆದಾರರೇ ರಾಜ್ಯ ಬಿಜೆಪಿ ಸರಕಾರದ ನಲ್ವತ್ತು ಪರ್ಸೆಂಟ್ ಕಮಿಷನ್ ಕುರಿತು ಹೇಳ್ತಾರೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪೂಜ್ಯ ದಿಂಗಲೇಶ್ವರ ಸ್ವಾಮಿಯವರು ನನ್ನ ಬಳಿಯೂ ಹಣ ಕೇಳಿದ್ದಾರೆ ಎಂದು ಹೇಳಿದ್ದಾಗಿ ರಾಹುಲ್ ಗಾಂಧಿ ಹೇಳಿದರು.

ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಸರಕಾರ ರಚನೆಯಾಗಿ ಗಂಟೆಯೊಳಗೆ ಪಕ್ಷ ನೀಡಿದ ಗ್ಯಾರಂಟಿಗಳ ಜಾರಿ ಗ್ಯಾರಂಟಿ : ರಾಹುಲ್ ಗಾಂಧಿ ಭರವಸೆ Rating: 5 Reviewed By: karavali Times
Scroll to Top