ಬಂಟ್ವಾಳ, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ನಿವಾಸಿ, ಗುಡಿನಬಳಿ ಬಿ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯ ನೀರಿನ ಸಮಸ್ಯೆಗೆ ತಾನೇ ಭಗೀರಥ ಶ್ರಮಪಟ್ಟು ಪರಿಹಾರ ಕಂಡುಕೊಂಡು ಸಾರ್ಥಕ ಘಟನೆಯೊಂದು ವರದಿಯಾಗಿದೆ.
ನಾಯಿಲ ನಿವಾಸಿ ಲೋಕನಾಥ ಪೂಜಾರಿ ಹಾಗೂ ಮೋಹಿನಿ ದಂಪತಿಯ ಪುತ್ರ ಪಿಯುಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿ 17 ವರ್ಷದ ಸೃಜನ್ ಪೂಜಾರಿ ಎಂಬಾತನೇ ಏಕಾಂಗಿ ಸಾಹಸ ಮೆರೆದು ಬಾವಿ ತೋಡಿದ ವಿದ್ಯಾರ್ಥಿಯಾಗಿದ್ದಾನೆ. ತಮ್ಮ ಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ಹಲವು ದಿನಗಳಿಂದ ಇರುವುದನ್ನು ಮನಗಂಡ ವಿದ್ಯಾರ್ಥಿ ಸೃಜನ್ ತನ್ನ ಮನೆಯ ಹಿತ್ತಲಲ್ಲಿ ತಾನೇ ನೀರಿನ ಒರೆತ ಇರುವ ಜಾಗವೊಂದನ್ನು ತನ್ನ ಸ್ವವಿವೇಚನೆಯಿಂದ ಗುರುತಿಸಿಕೊಂಡು ಕಾಲೇಜು ರಜಾ ಸಮಯದಲ್ಲಿ ಬಾವಿ ತೋಡುವ ಕೆಲಸ ಆರಂಭಿಸಿದ್ದಾನೆ,
ಸಣ್ಣ ಗುಂಡಿ ತೋಡಿ ಆರಂಭಿಸಿದ ತನ್ನ ಪ್ರಯತ್ನದ ಫಲ ಇದೀಗ 24 ಅಡಿ ಆಳದ ಬಾವಿಯಾಗಿ ಪರಿವರ್ತನೆಗೊಂಡಿದೆ. ಮಾತ್ರವಲ್ಲ ಬಾವಿಯ ತಳದಲ್ಲಿ ನೀರಿನ ಒರೆತವೂ ಕಂಡು ಬಂದಿದೆ.
ವಿದ್ಯಾರ್ಥಿ ಏಕಾಂಗಿಯಾಗಿ ಬಾವಿ ತೋಡಿ ಇದೀಗ ಅದರಲ್ಲಿ ಯಶಸ್ವಿಯಾಗಿದ್ದು, ವಿದ್ಯಾರ್ಥಿಯ ಸಾಧನೆಯಿಂದ ಹೆತ್ತವರ ಸಹಿತ ಊರವರು ಕೂಡಾ ಆತನ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
0 comments:
Post a Comment