ಬೆಳ್ತಂಗಡಿ, ಎಪ್ರಿಲ್ 22, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ ಎ ನಿಶ್ಮಾ 547 ಅಂಕಗಳನ್ನು ಪಡೆದು 91.16 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.
ಈಕೆ ಬೆಳ್ತಂಗಡಿ ತಾಲೂಕು, ಕಿಲ್ಲೂರು ನಿವಾಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಉಮೈಮಾ ದಂಪತಿಯ ಪುತ್ರಿಯಾಗಿದ್ದಾಳೆ. ಈಕೆ ನೀಟ್ ಪರೀಕ್ಷೆ ಬರೆದು ವೈದ್ಯೆಯಾಗುವ ಆಸಕ್ತಿ ಹೊಂದಿದ್ದಾಳೆ.
ಧಾರ್ಮಿಕ ಖತೀಬರೋರ್ವರ ಪುತ್ರಿಯಾಗಿರುವ ಈಕೆಯ ಸಾಧನೆಗೆ ಕಾಲೇಜು ಅಧ್ಯಾಪಕರು ಹಾಗೂ ಊರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರ ಹಿರಿಯ ಪುತ್ರಿ ಸುಹೈಮಾ ಎಂಎಸ್ಸಿ ಬಿಎಡ್ ಪದವಿ ಪೂರೈಸಿ ಕಾಜೂರು ರಹ್ಮಾನಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆ, ಇನ್ನೋರ್ವ ಪುತ್ರಿ ಆಯಿಷಾ ತನ್ನ ಪ್ರಥಮ ಪ್ರಯತ್ನದಲ್ಲೇ ಸಿ ಎ ತೇರ್ಗಡೆಯಾಗಿದ್ದಾಳೆ. ಓರ್ವ ಪುತ್ರ ಮುಹಮ್ಮದ್ ಆಶಿಕ್ ಬಿಕಾಂ ಪದವಿ ಮುಗಿಸಿ ಸಿಎಂಎ ಕೋರ್ಸು ಮಾಡುತ್ತಿದ್ದಾನೆ.
ತಂದೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ಹಲವು ಮಸೀದಿಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದು, ಇದೀಗ ನಿವೃತ್ತ ಜೀವನದ ಜೊತೆಗೆ ಮನೆಯಲ್ಲೇ ಇರುವ ಸ್ವಲ್ಪ ಕೃಷಿಯನ್ನು ನೋಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ.
0 comments:
Post a Comment