ಕಡಬ, ಎಪ್ರಿಲ್ 19, 2023 (ಕರಾವಳಿ ಟೈಮ್ಸ್) : ಆಲ್ಟೋ ಕಾರು ಹಾಗೂ ತೂಫಾನ್ ವಾಹನದ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಮಗು ಸಹಿತ ನಾಲ್ವರು ಮೃತಪಟ್ಟು, ಸುಮಾರು 20 ಮಂದಿ ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಡಬ ತಾಲೂಕು, ಬಿಳನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ.
ಮಧ್ಯಾಹ್ನ ಸುಮಾರು 2.15ರ ವೇಳೆಗೆ ಈ ಭೀಕರ ಅಪಘಾತ ನಡೆದಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಆಲ್ಟೋ ಕಾರಿನಲ್ಲಿದ್ದ ನಾಲ್ಕೂವರೆ ವರ್ಷದ ಮಗು ತಾನ್ವಿಕ್, ಕಾರು ಚಾಲಕ ಗಣೇಶ್ (26), ಕಾರಿನಲ್ಲಿದ್ದ ಉಲ್ಲಾಸ್ (28) ಹಾಗೂ ತೂಫಾನ್ ವಾಹನದಲ್ಲಿದ್ದ ನೇತ್ರಾವತಿ (28) ಎಂಬವರು ಮೃತಪಟ್ಟಿದ್ದು, ಉಳಿದಂತೆ ಆಲ್ಟೋ ಕಾರಿನಲ್ಲಿದ್ದ ಮೇಘನಾ (22), ನಿಶ್ಚಲ್ (2), ಕುಸುಮ (60), ಇಬ್ಬರು ಮಕ್ಕಳು, ಓರ್ವ ಹೆಂಗಸು ಹಾಗೂ ತೂಫಾನ್ ವಾಹನದಲ್ಲಿದ್ದ ವರ್ಷ (17), ಸಂಗೀತ (22), ತೇಜಸ್ (1 ವರ್ಷ), ಸುಶೀಲ (50), ಆನಂದ (30), ಘಾನವಿ (14), ದೀಪ (32), ಹಂಸನಿ (10), ಶಿವಾನಿ (5), ಶೋಭಾ (40), ರಾಘು (32), ಸಂಜು (22), ರಾಜೇಶ್ (28), ರೇಣುಕಾ (65) ಎಂಬವರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮೃತರು ಹಾಗೂ ಗಾಯಾಳುಗಳೆಲ್ಲರೂ ಹಾಸನ ಜಿಲ್ಲೆಯ ಬೇಲೂರು ತಾಲೂಕು ನಿವಾಸಿಗಳು ಎಂದು ತಿಳಿದು ಬಂದಿದೆ.
ಆಲ್ಟೋ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಅಪಘಾತದ ನಡೆದ ಸ್ಥಳೀಯ ನಿವಾಸಿ ಸುನೀಲ್ ಪಿ ಟಿ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2023 ಕಲಂ 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment