ಬಂಟ್ವಾಳ, ಎಪ್ರಿಲ್ 08, 2023 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಮಿತ್ತಬೈಲು ಎಂಬಲ್ಲಿ ಶುಕ್ರವಾರ (ಎಪ್ರಿಲ್ 7) ರಾತ್ರಿ ಸುಮಾರು 11 ಗಂಟೆ ವೇಳೆಗೆ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಮನೆ ತಲುಪಲು ಒಂದೈದು ನಿಮಿಷ ಇರುವ ಅಂತರದಲ್ಲಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ವೃದ್ದರೋರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ವರದಿಯಾಗಿದೆ.
ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ನಂದರಬೆಟ್ಟು-ಅಲೆತ್ತೂರು ನಿವಾಸಿ ಸದಾಶಿವ ಆಚಾರ್ಯ (77) ಎಂಬವರೇ ಮೃತಪಟ್ಟ ವ್ಯಕ್ತಿ. ಅವರ ಮಗ ಗಣೇಶ್, ಅಳಿಯ ಸುರೇಶ್ ಆಚಾರ್ಯ ಹಾಗೂ ಮೊಮ್ಮಗ, ಕಾರು ಚಾಲಕ ಆಕಾಶ್ ಗಾಯಗೊಂಡವರು.
ಒಂದೇ ಕುಟುಂಬಕ್ಕೆ ಸೇರಿದ ಇವರು ಶುಕ್ರವಾರ ಪುತ್ತೂರಿನ ಸಂಬಂಧಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ವಾಪಾಸು ಮನೆಗೆ ಬರುತ್ತಿದ್ದ ವೇಳೆ ಬಿ ಸಿ ರೋಡು ಸಮೀಪದ ಮಿತ್ತಬೈಲು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ನಾಯಿಯೊಂದು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದರೂ ರಸ್ತೆಯಲ್ಲಿ ಮರಳು ಬಿದ್ದಿದ್ದರಿಂದ ಕಾರು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದಾಶಿವ ಆಚಾರ್ಯ ಅವರಿಗೆ ಅಪಘಾತದಿಂದ ಹಣೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಪರ್ಲಿಯಾ ಆಸ್ಪತ್ರಗೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
0 comments:
Post a Comment