ಬೆಂಗಳೂರು, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸುರ್ದೀ ಸಭೆಗಳ ಬಳಿಕ ಕೊನೆಗೂ ಗಜ ಪ್ರಸವ ಮಾಡಿದ್ದು, 189 ಕ್ಷೇತ್ರಗಳ ಅಭ್ಯಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ (ಎಪ್ರಿಲ್ 11) ರಾತ್ರಿ ಬಿಡುಗಡೆಗೊಳಿಸಿದೆ. ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಸಿಂಗ್ ರಾತ್ರಿ 9 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮೊದಲ ಪಟ್ಟಿ ಘೋಷಿಸಿದರು.
ಘೋಷಣೆಯಾಗಿರುವ 189 ಅಭ್ಯರ್ಥಿಗಳ ಪಟ್ಟಿಯಲ್ಲಿ 10 ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ದಕ್ಕಿಲ್ಲ. ಆ ಪೈಕಿ ಐವರು ಶಾಸಕರು ಕರಾವಳಿ ಕರ್ನಾಟಕದವರು ಆಗಿದ್ದಾರೆ. ಉಡುಪಿಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್, ಸುಳ್ಯದಿಂದ ಅಂಗಾರ, ಕಾಪು ಕ್ಷೇತ್ರದಿಂದ ಲಾಲಾಜಿ ಮೆಂಡೆನ್ ಹಾಗೂ ಪುತ್ತೂರು ಕ್ಷೇತ್ರದಿಂದ ಸಂಜೀವ ಮಠಂದೂರು ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಕಾರಣ ಅವರ ಸ್ಥಾನಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಬೈಂದೂರಿನಲ್ಲಿ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ದೊರೆಯುವುದ ಕಷ್ಟ ಎನ್ನಲಾಗುತ್ತಿದೆ.
ಉಡುಪಿಯಲ್ಲಿ ಯಶ್‍ಪಾಲ್ ಸುವರ್ಣಗೆ ಅವಕಾಶ ನೀಡಲಾಗಿದೆ. ಸುಳ್ಯದಲ್ಲಿ ಭಾಗೀರಥಿ ಮರುಳ್ಯಗೆ ಟಿಕೆಟ್ ದೊರೆತರೆ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಪುತ್ತೂರಿನಲ್ಲಿ ಜಿ ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡಗೆ ಟಿಕೆಟ್ ನೀಡಲಾಗಿದೆ.
ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ದಶಕಗಳ ಕಾಲ ಪ್ರತಿನಿಧಿಸಿದ್ದ ಕುಂದಾಪುರ ಕ್ಷೇತ್ರದಿಂದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಎ. ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಬಿಜೆಪಿ ಟಿಕೆಟ್ ದೊರೆತಿದೆ. ಕಾರ್ಕಳದಲ್ಲಿ ಸಚಿವ ವಿ ಸುನಿಲ್ ಕುಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಮೂಡಬಿದ್ರೆಯಲ್ಲಿ ಉಮಾನಾಥ್ ಕೋಟ್ಯಾನ್, ಮಂಗಳೂರು ಉತ್ತರದಿಂದ ಡಾ ವೈ ಭರತ್ ಶೆಟ್ಟಿ, ಮಂಗಳೂರು ದಕ್ಷಿಣದಿಂದ ವೇದವ್ಯಾಸ್ ಕಾಮತ್, ಬಂಟ್ವಾಳ ಕ್ಷೇತ್ರದಿಂದ ಯು ರಾಜೇಶ್ ನಾಯ್ಕ್ ಮರು ಆಯ್ಕೆ ಬಯಸಿ ಟಿಕೆಟ್ ದಕ್ಕಿಸಿಕೊಂಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಗಳೂರು ಕ್ಷೇತ್ರದಿಂದ ಸೋಲಿಲ್ಲದ ಸರದಾರರಾಗಿರುವ ಕೈ ಅಭ್ಯರ್ಥಿ ಯು ಟಿ ಖಾದರ್ ವಿರುದ್ದ ಸತೀಶ್ ಕುಂಪಲಗೆ ಟಿಕೆಟ್ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ವಿರುದ್ಧ ಸುನಿಲ್ ಹೆಗಡೆಗೆ ಟಿಕೆಟ್ ನೀಡಲಾಗಿದೆ. ಕಾರವಾರದಿಂದ ರೂಪಾಲಿ ನಾಯ್ಕ್, ಕುಮಟಾದಿಂದ ದಿನಕರ ಶೆಟ್ಟಿ, ಭಟ್ಕಳದಿಂದ ಸುನಿಲ್ ನಾಯ್ಕ್, ಶಿರಸಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಲ್ಲಾಪುರದಿಂದ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಬಾರಿ ಬಿಜೆಪಿ ಪಕ್ಷದಿಂದ 52 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದೆ. ಪುತ್ತೂರು, ಸುಳ್ಯ ಸಹಿತ ಒಟ್ಟು 8 ಮಂದಿ ಮಹಿಳೆಯರಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದೆ. ಓಬಿಸಿಗೆ 32, 30 ಎಸ್ಸಿ, 16 ಎಸ್ಟಿ, 9 ಮಂದಿ ಡಾಕ್ಟರ್, ತಲಾ ಒಬ್ಬರು ನಿವೃತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿ, ಐವರು ವಕೀಲರು, ಮೂರು ಮಂದಿ ಶೈಕ್ಷಣಿಕ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಿದೆ.
ಎಪ್ರಿಲ್ 13 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ಅದೇ ದಿನ ನಾಮಪತ್ರ ಸಲ್ಲಿಕೆಯೂ ಆರಂಭವಾಗಲಿದೆ. ಎಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಎಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎಪ್ರಿಲ್ 24 ನಾಮಪತ್ರ ವಾಪಾಸು ಪಡೆಯಲು ಅಂತಿಮ ದಿನವಾಗಿದೆ. ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ.
0 comments:
Post a Comment