ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಕಾಂಗ್ರೆಸ್ಸಿನಿಂದ ಜನಪರ ಯೋಜನೆಗಳ ಗ್ಯಾರಂಟಿ ಜಾರಿ ಸಾಧ್ಯ : ಆರ್ ಪದ್ಮರಾಜ್ - Karavali Times ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಕಾಂಗ್ರೆಸ್ಸಿನಿಂದ ಜನಪರ ಯೋಜನೆಗಳ ಗ್ಯಾರಂಟಿ ಜಾರಿ ಸಾಧ್ಯ : ಆರ್ ಪದ್ಮರಾಜ್ - Karavali Times

728x90

28 April 2023

ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಕಾಂಗ್ರೆಸ್ಸಿನಿಂದ ಜನಪರ ಯೋಜನೆಗಳ ಗ್ಯಾರಂಟಿ ಜಾರಿ ಸಾಧ್ಯ : ಆರ್ ಪದ್ಮರಾಜ್

ಬಂಟ್ವಾಳ, ಎಪ್ರಿಲ್ 28, 2023 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಬಿಜೆಪಿ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಜೀವನಕ್ಕೆ ನೆರವಾಗುವ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ ಬಿಜೆಪಿಗೆ ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ಬಂದಲ್ಲಿ ಅದೇಗೆ ಜಾರಿಗೆ ತರಲಿದೆ. ಅದಕ್ಕೆ ಬೇಕಾಗುವ ಆರ್ಥಿಕತೆ ಎಲ್ಲಿಂದ ಹೊಂದಿಸಲಿದೆ ಎಂಬ ಚಿಂತೆ ಕಾಡುತ್ತಿದೆ. ಕಾಂಗ್ರೆಸ್ ಸರಕಾರ ಬಂದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲಿದೆ. ಬಿಜೆಪಿಯಂತೆ 40 ಪರ್ಸೆಂಟ್ ಭ್ರಷ್ಟಾಚಾರ ಕಾಂಗ್ರೆಸ್ ಸರಕಾರದಲ್ಲಿ ನಡೆಯಲ್ಲ. ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದಲ್ಲಿ ಜನಪರ ಯೋಜನೆಗಳ ಜಾರಿ ಖಂಡಿತಾ ಸಾಧ್ಯವಿದೆ. ಇದಕ್ಕೆ ಈ ಹಿಂದೆ ಸಿದ್ದರಾಮಯ್ಯ ಸರಕಾರ ನೀಡಿದ ಪ್ರಣಾಳಿಕೆಯಲ್ಲಿನ 95 ಶೇಕಡಾ ಆಶ್ವಾಸನೆಗಳನ್ನು ಈಡೇರಿಸಿರುವುದೇ ಸಾಕ್ಷಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಆರ್ ಪದ್ಮರಾಜ್ ಹೇಳಿದರು. 

ಶುಕ್ರವಾರ ಬೆಳಿಗ್ಗೆ ಬಿ ಸಿ ರೋಡಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಆಡಳಿತ ಈ ದೇಶಕ್ಕೆ ಎಷ್ಟು ಅನಿವಾರ್ಯತೆ ಇದೆ ಎಂಬುದು ಇತ್ತೀಚೆಗಿನ ದಿನಗಳಲ್ಲಿ ಸರ್ವರಿಗೂ ಮನದಟ್ಟಾಗುತ್ತಿದೆ. ಇವತ್ತು ದೇಶದ ಜನ ಭಯದ ವಾತಾವರಣ ಎದುರಿಸುತ್ತಿದ್ದಾರೆ. ದೇಶದಲ್ಲಿ ಯಾರಿಗೂ ನೆಮ್ಮದಿ ಇಲ್ಲ, ಸಾರಮಸ್ಯ ಇಲ್ಲದಾಗಿದೆ. ಇಂದು ದೇಶಕ್ಕೆ ಸಹೋದರತ್ವದ ಅಗತ್ಯತೆ ಇದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆ ದೇಶದ ದಿಕ್ಕನ್ನು ಬದಲಿಸುವ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜನ ಚುನಾಯಿಸುವಂತೆ ಕರೆ ನೀಡಿದರು. 

ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ದಿಯ ಹರಿಕಾರರಾಗಿ ಮಿಂಚಿದ ರಮಾನಾಥ ರೈ ಮೇಲೆ ಈ ಬಾರಿ ಜನರ ಒಲವಿದೆ. ರೈಗಳ ಗೆಲುವು ಈ ಬಾರಿ ಶತಸ್ಸಿದ್ದ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಪರ ಕೆಲಸಗಳಿಗಾಗಿ ರೈಗಳ ಗೆಲುವು ಅಗತ್ಯವಾಗಿದೆ ಎಂದ ಪದ್ಮರಾಜ್ ಕಾಂಗ್ರೆಸ್ ಇದುವರೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ ಇತಿಹಾಸ ಹೊಂದಿದರೆ, ಕೊಟ್ಟ ಒಂದೇ ಒಂದು ಭರವಸೆಗಳನ್ನೂ ಈಡೇರಿಸದ ಜನವಿರೋಧಿ ಸರಕಾರ ಎಂಬ ಕುಖ್ಯಾತಿ ಬಿಜೆಪಿ ಸರಕಾರಗಳದ್ದು ಎಂದು ವಾಗ್ದಾಳಿ ನಡೆಸಿದರು. 

ದೇಶವೇ ಗೌರವಿಸುವ ತತ್ವಜ್ಞಾನಿಗಳಾದ ಬ್ರಹ್ಮಶ್ರೀ ನಾರಾಯಣ ಗುರು, ಸರ್ವಜ್ಞ ಮೊದಲಾದ ಮಹಾನುಭಾವರ ಪಠ್ಯಗಳನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದು ಹಾಕುವ ಚಿಂತನೆ ನಡೆಸುವ ಬಿಜೆಪಿ ಸರಕಾರ ಚಿಂತನೆ ಎಂತಹದ್ದಿರಬೇಕು ಎಂದು ಪ್ರಶ್ನಿಸಿದ ಪದ್ಮರಾಜ್ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಗಣರಾಜ್ಯೋತ್ಸವ ಪೆರೇಡ್ ನಿಂದಲೂ ತೆಗೆದು ಹಾಕಲಾಯಿತು. ಇದೆಲ್ಲಾ ಯಾಕೆ ಬೇಕಿತ್ತು? ಗುರುಗಳ ಪರ ಚಿಂತನೆ ಅಳವಡಿಸಲು ಸಾರ್ವಜನಿಕರು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಸುವ ಉದ್ದೇಶ ಬಿಜೆಪಿ ಸರಕಾರಕ್ಕೆ ಏಕೆ ಬಂತು. ಇದೆಲ್ಲವೂ ಹಿಂದುಳಿದ ವರ್ಗಗಳ ಸಮುದಾಯದ ಕಡೆಗಣನೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಸರಕಾರ ಜಾರಿಗೆ ತಂದ ಯೋಜನೆಗಳ ಫಲ ಉಣ್ಣುತ್ತಾ, ಕಾಂಗ್ರೆಸ್ ಮಾಡಿದ ವ್ಯವಸ್ಥೆಯಲ್ಲಿ ಜೀವನ ರೂಪಿಸಿಕೊಂಡಿರುವ ಮಂದಿಗಳು ಕೊನೆಗೆ ಕೇಳುತ್ತಾರೆ ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು. ಇದು ಅವರ ಮಾನಸಿಕ ದಿವಾಳಿತಕ್ಕೆ ಸಾಕ್ಷಿಯಲ್ಲದೆ ಇನ್ನೇನೂ ಅಲ್ಲ ಎಂದ ಪದ್ಮರಾಜ್ ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ರಾಜಕೀಯ ಲಾಭ ಗಿಟ್ಟಿಸಿಕೊಂಡದ್ದೇ ಬಿಜೆಪಿ ಸಾಧನೆ ಎಂದು ಕಿಡಿ ಕಾರಿದರು. 

ಈ ಸಂದರ್ಭ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖರಾದ ಸಂಜೀವ ಪೂಜಾರಿ, ವಾಸು ಪೂಜಾರಿ, ಉಮೇಶ್ ಬೋಳಂತೂರು, ಉಮೇಶ್ ನಾವೂರು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ರಿಯಾಝ್ ಹುಸೈನ್ ಬಂಟ್ವಾಳ, ಮಾಯಿಲಪ್ಪ ಸಾಲ್ಯಾನ್, ಶಬೀರ್ ಸಿದ್ದಕಟ್ಟೆ, ಜೋಸ್ಪಿನ್ ಡಿಸೋಜ, ತಿಮ್ಮಪ್ಪ ಪೂಜಾರಿ, ಜಗದೀಶ್ ಕೊಯಿಲ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಕಾಂಗ್ರೆಸ್ಸಿನಿಂದ ಜನಪರ ಯೋಜನೆಗಳ ಗ್ಯಾರಂಟಿ ಜಾರಿ ಸಾಧ್ಯ : ಆರ್ ಪದ್ಮರಾಜ್ Rating: 5 Reviewed By: karavali Times
Scroll to Top