ಬಂಟ್ವಾಳ, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ರಾಜ್ಯಮಟ್ಟದ ನಾಯಕ ಇಬ್ರಾಹಿಂ ಕೈಲಾರ್ ಅವರು ರಮಾನಾಥ ರೈ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬುಧವಾರ ಬಿ ಸಿ ರೋಡಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಉದ್ಘಾಟನೆ ವೇಳೆ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಇಬ್ರಾಹಿಂ ಕೈಲಾರ್ ರಮಾನಾಥ ರೈ ಅವರ ಅಭಿವೃದ್ದಿ ಕೆಲಸ-ಕಾರ್ಯಗಳನ್ನು ಜನ ತುಲನೆ ಮಾಡಬೇಕಾದರೆ ಕ್ಷೇತ್ರದಲ್ಲಿ ರೈಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬೇಕಾಯಿತು. ಇದು ಅತ್ಯಂತ ವಿಷಾದನೀಯ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಇಷ್ಟೊಂದು ಪ್ರಬುದ್ದ ರಾಜಕಾರಣಿ, ಸಜ್ಜನ-ಅಜಾತ ಶತ್ರು, ಭ್ರಷ್ಟಾಚಾರ ರಹಿತ ರಾಜಕಾರಣಿ ನಮ್ಮ ನಡುವೆ ಇದ್ದುದನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದೆ ಚಡಪಡಿಸುವಂತಹ ಸನ್ನಿವೇಶ ಸೃಷ್ಟಿಸಿಕೊಂಡದ್ದು ಕ್ಷೇತ್ರದ ಜನರ ದೌರ್ಭಾಗ್ಯ. ಇದೀಗ ಎಲ್ಲವೂ ಜನರಿಗೆ ಮನವರಿಕೆಯಾಗಿದ್ದು, ನಾನು ಕೂಡಾ ರೈ ಅವರ ಅಭಿವೃದ್ದಿ ಪರ ಚಿಂತನೆಗಳಿಗೆ ಮಾತ್ರ ಗೌರವಿಸಿ ಯಾವುದೇ ಇತರ ರಾಜಕೀಯ ಉದ್ದೇಶ ಇಲ್ಲದೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಹಲವು ವರ್ಷಗಳ ಹಿಂದೆಯೇ ರಮಾನಾಥ ರೈ ಪರವಾಗಿ ಕೆಲಸ ಮಾಡುವ ಇರಾದೆ ಮನಸ್ಸಿನಲ್ಲಿ ಇತ್ತಾದರೂ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಇನ್ನು ಮುಂದಿನ ದಿನಗಳಲ್ಲಿ ರೈಗಳನ್ನು ಗೆಲ್ಲಿಸುವ ಏಕಮಾತ್ರ ಗುರಿ ನಮ್ಮೆಲ್ಲರ ಮುಂದಿದೆ ಎಂದರು.
ಈ ಸಂದರ್ಭ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಪಿಯೂಸ್ ಎಲ್ ರೋಡ್ರಿಗಸ್, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಎಂ ಎಸ್ ಮುಹಮ್ಮದ್, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಅಬೂಬಕ್ಕರ್ ಸಿದ್ದೀಕ್, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪಿ ಎ ರಹೀಂ ಬಿ ಸಿ ರೋಡು, ನವಾಝ್ ಬಡಕಬೈಲು, ಜಿ ಎಂ ಅಮಾನುಲ್ಲಾ, ಶರೀಫ್ ಭೂಯಾ, ಜಯಂತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment