ಬಂಟ್ವಾಳ, ಎಪ್ರಿಲ್ 06, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಗೂಡಿನಬಳಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಪರಿಸರವಿಡೀ ಬೆಂಕಿ ಜ್ವಾಲೆ ಹಾಗೂ ಭಾರೀ ಪ್ರಮಾಣದ ಹೊಗೆ ಆವರಿಸಿಕೊಂಡು ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ಘಟನೆ ನಡೆದ ಪರಿಸರ ಬಂಟ್ವಾಳ ಅಗ್ನಿಶಾಮಕ ಠಾಣೆಯ ಕೂದಳೆಲೆಯ ಅಂತರದಲ್ಲಿದ್ದು, ಸಾರ್ವಜನಿಕರು ಹಲವು ಬಾರಿ ಕರೆ ಮಾಡಿದರೂ ತಾಸುಗಟ್ಟಲೆ ಸಮಯ ಅಗ್ನಿಶಾಮಕ ವಾಹನವಾಗಲೀ, ಸಿಬ್ಬಂದಿಗಳಾಗಲೀ ಸ್ಥಳಕ್ಕೆ ಆಗಮಿಸದ ಹಿನ್ನಲೆಯಲ್ಲಿ ಬೆಂಕಿಯ ಕೆನ್ನಾಲಗೆ ಇನ್ನಷ್ಟು ವಿಸ್ತರಿಸಿಕೊಂಡಿತ್ತು. ಬಳಿಕ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸರು ಹಾಗೂ ಮೆಸ್ಕಾಂ ಇಲಾಖಾ ಸಿಬ್ಬಂದಿಗಳು ಬೆಂಕಿ ನಂದಿಸುವ ಹಾಗೂ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ ದೃಶ್ಯ ಕಂಡು ಬಂತು.
ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ರೈಲ್ವೆ ನಿಲ್ದಾಣ ಇದ್ದು, ಸ್ವಲ್ಪ ಮುಂದೆ ಬೆಂಕಿ ವಿಸ್ತರಿಸಿದರೆ ಬಿ ಸಿ ರೋಡು ಪೇಟೆಗೆ ಆವರಿಸುವ ಅಪಾಯವೂ ಇತ್ತು. ಅಲ್ಲದೆ ಅದೇ ಸ್ಥಳದಲ್ಲಿ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಪೈಪ್ ಲೈನ್ ಕೂಡಾ ಇದ್ದು ಒಟ್ಟಾರೆ ಜನಜೀವನವನ್ನೇ ಗೊಂದಲಕ್ಕೀಡುಮಾಡುವ ಸನ್ನಿವೇಶವೇ ಅಲ್ಲಿತ್ತು. ಆದರೂ ಅಗ್ನಿಶಾಮಕ ಸಿಬ್ಬಂದಿಗಳಾಗಲೀ, ಬಂಟ್ವಾಳ ಪುರಸಭೆಯ ನೀರಿನ ಟ್ಯಾಂಕರ್ ಆಗಲೀ ಸಮಯಕ್ಕೆ ಸ್ಥಳಕ್ಕಾಗಮಿಸದ ಪರಿಣಾಮ ಸ್ಥಳೀಯರು ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸನ್ನಿವೇಶ ಕಂಡು ಬಂತು. ಸುಡು ಬೇಸಿಗೆ ಸಮಯ ಇದಾಗಿದ್ದು, ಅಲ್ಲಲ್ಲಿ ಅಗ್ನಿ ಅನಾಹುತಗಳ ಸರಣಿಯೇ ಸಂಭವಿಸುತ್ತಿದ್ದರೂ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಗಳು ಇನ್ನೂ ಕೂಡಾ ಸನ್ನದ್ದ ಸ್ಥಿತಿಯಲ್ಲಿ ಇಲ್ಲದೆ ಇರುವುದೇ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
0 comments:
Post a Comment