ಬಂಟ್ವಾಳ, ಎಪ್ರಿಲ್ 20, 2023 (ಕರಾವಳಿ ಟೈಮ್ಸ್) : ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ತರಲು 18ವರ್ಷ ತುಂಬಿದ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಬಂಟ್ವಾಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಹೈದರ್ ಆಲಿ ಮನವಿ ಮಾಡಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ಮತದಾನ ಸಾಕ್ಷರತಾ ಕ್ಲಬ್‍ಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಮತದಾರರ ಜಾಗೃತಿ ಕಾರ್ಯಕ್ರಮ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮತದಾನದ ಮಹತ್ವವನ್ನು ಪ್ರಾತ್ಯಕ್ಷಿಕೆಯೊಂದಿಗೆ ಇದೇ ಮೊದಲ ಬಾರಿ ಮತದಾನ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಸುಯೋಗ ವರ್ಧನ್ ಡಿ ಎಂ ಅವರು ಮಾತನಾಡಿ, ಯುವ ಸಮುದಾಯ ಸ್ವಯಂ ಮತದಾನದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಇತರರನ್ನೂ ಮತದಾನಕ್ಕೆ ಪ್ರೇರೇಪಿಸುವಂತೆ ಕರೆ ನೀಡಿದರು.
ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಸ್ವಾಗತಿಸಿ, ಮತದಾರ ಜಾಗೃತಿ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಡಾ ವಿನಾಯಕ ಕೆ ಎಸ್ ವಂದಿಸಿದರು.
0 comments:
Post a Comment