ಸಹಸ್ರ ಸಂಖ್ಯೆಯ ಕಾರ್ಯಕರ್ತರ ಹರ್ಷೋದ್ಘಾರದ ಮೆರವಣಿಗೆಯಲ್ಲಿ ಸಾಗಿ ಬಂದು 9ನೇ ಬಾರಿಗೆ ನಾಮಪತ್ರ ಸಲ್ಲಿಸಿದ ಮಾಜಿ ಸಚಿವರು
ಬಂಟ್ವಾಳ, ಎಪ್ರಿಲ್ 20, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 9ನೇ ಬಾರಿಗೆ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಬಿ ರಮಾನಾಥ ರೈ ಗುರುವಾರ ಸಹಸ್ರ ಸಂಖ್ಯೆಯ ಕಾರ್ಯಕರ್ತರ, ಅಭಿಮಾನಿಗಳ ಮೆರವಣಿಗೆ ಮೂಲಕ ಸಾಗಿ ಬಂದು ನಾಮಪತ್ರ ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ನಂದಾವರ ದೇವಸ್ಥಾನ, ಮಿತ್ತಬೈಲು ಮಸೀದಿ-ದರ್ಗಾ, ಬಂಟ್ವಾಳ-ಕೆಳಗಿನಪೇಟೆ ಮಸೀದಿ-ದರ್ಗಾ, ಪೊಳಲಿ ದೇವಸ್ಥಾನ ಹಾಗೂ ಮೊಡಂಕಾಪು ಚರ್ಚಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಬೃಹತ್ ಸಂಖ್ಯೆಯ ಕಾರ್ಯಕರ್ತರ ದಂಡಿದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಬಿ ಸಿ ರೋಡಿನ ಹೃದಯ ಭಾಗದಲ್ಲಿರುವ ಶ್ರೀ ರಕ್ತೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಬಿ ಸಿ ರೋಡು ಮಿನಿ ವಿಧಾನಸೌಧದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಅವರು ಮಧ್ಯಾಹ್ನ 12.35ಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬಂಟ್ವಾಳದಲ್ಲಿ ಆರು ಬಾರಿ ಶಾಸಕನಾಗಿ ಮೂರು ಬಾರಿ ಸಚಿವನಾಗಿಯೂ ಕಾರ್ಯನಿರ್ವಹಿಸಿರುವ ನಾನು ಶಕ್ತಿ ಮೀರಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಇನ್ನಷ್ಟು ಕನಸಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಈ ಬಾರಿ ಕೊನೆಯ ಬಾರಿಗೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು.
ಸುಧೀರ್ಘ ಅವಧಿಯಲ್ಲಿ ಜನಸೇವೆಗೈಯಲು ನನಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಒಂದೇ ಕ್ಷೇತ್ರದಲ್ಲಿ ಒಂದೇ ಪಕ್ಷದಿಂದ, ಒಂದೇ ಚಿಹ್ನೆಯಡಿ, ಒಂದೆ ಧ್ವಜದಡಿ, ಒಂದೇ ಸಿದ್ದಾಂತದಡಿ, ಪಕ್ಷ ಬದಲಿಸದೆ, ಪಲಾಯನವಾದ ಮಾಡದೆ ದೃಢ ಹಾಗೂ ಅಚಲ ಸಿದ್ದಾಂತದೊಂದಿಗೆ ರಾಜಕೀಯ ಜೀವನ ನಡೆಸಿ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಕೂಲ ಸನ್ನಿವೇಶ ಇದ್ದ ಸಂದರ್ಭದಲ್ಲೂ ಪಕ್ಷದ ಏಕೈಕ ಶಾಸಕನಾಗಿ ನನ್ನನ್ನು ಕ್ಷೇತ್ರದ ಜನ ಆರಿಸಿ ವಿಧಾನಸಭೆಗೆ ಕಳಿಸಿದ್ದರು. ಅಂತಹ ಪ್ರತಿಕೂಲ ಸನ್ನಿವೇಶದಲ್ಲೂ ನನ್ನ ಜೊತೆ ಹೆಗಲು ಕೊಟ್ಟು ನಿಂತ ಕ್ಷೇತ್ರದ ಮತದಾರರ ಋಣವನ್ನು ಜನ್ಮ ಜನ್ಮಾಂತರಕ್ಕೂ ತೀರಿಸಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಈ ಸಂದರ್ಭ ಧರ್ಮಪತ್ನಿ ಧನಭಾಗ್ಯ ಆರ್ ರೈ, ಪತ್ರಿ ಚರಿಷ್ಮಾ ಆರ್ ರೈ, ಸಹೋದರಿ ಚೆನ್ನವೇಣಿ ಎಂ ಶೆಟ್ಟಿ, ವಿಧಾನ ಪರಿಷತ್ ಸದಸ್ಯರುಗಳಾದ ಬಿ ಕೆ ಹರಿಪ್ರಸಾದ್, ಕೆ ಹರೀಶ್ ಕುಮಾರ್, ಡಾ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಐವನ್ ಡಿ’ಸೋಜ, ಮಾಜಿ ಶಾಸಕಿ ಟಿ ಶಕುಂತಳಾ ಶೆಟ್ಟಿ, ಪುತ್ತೂರು ಕ್ಷೇತ್ರದ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಮಂಜೇಶ್ವರ ಶಾಸಕ ಅಶ್ರಫ್, ಕೇರಳದ ಖ್ಯಾತ ನ್ಯಾಯವಾದಿ ಗೋವಿಂದನ್, ಕೆಪಿಸಿಸಿ ಸದಸ್ಯರುಗಳಾದ ಎಂ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಪ್ರಮುಖರಾದ ರಾಕೇಶ್ ಮಲ್ಲಿ, ಹಾಜಿ ಬಿ ಎಚ್ ಖಾದರ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಮಮತಾ ಗಟ್ಟಿ, ಮಾಯಿಲಪ್ಪ ಸಾಲ್ಯಾನ್, ಬಿ ಎಂ ಅಬ್ಬಾಸ್ ಅಲಿ, ಸುರೇಶ್ ಕುಮಾರ್ ನಾವುರು, ಸದಾಶಿವ ಬಂಗೇರ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.
ಮೆರವಣಿಗೆಯುದ್ದಕ್ಕೂ ರಮಾನಾಥ ರೈಗಳ ಅಭಿಮಾನಿಗಳು ಹೂವಿನ ಮಳೆಗೈದು ಶುಭ ಕೋರಿದರು. ಮೆರವಣಿಗೆ ಸಾಗಿ ಬಂದ ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು.
0 comments:
Post a Comment