ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಜಾತಿ, ಧರ್ಮಗಳ ಹೆಸರಿನಲ್ಲಿ ಜನರ ನಡುವೆ ಬಿರುಕು ಸೃಷ್ಟಿಸುವ ಮೂಲಕ ದೇಶ ಅಧಃಪತನವಾಗುವುದೇ ವಿನಃ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಿ ಸಿ ರೋಡಿನ ಹಿರಿಯ ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಹೇಳಿದರು.
ಬಿ ಸಿ ರೋಡಿನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಾತ್ಯಾತೀತ ತತ್ವ ಸಿದ್ಧಾಂತದಡಿಯಲ್ಲಿ ಭಾರತ ದೇಶ ಅಭಿವೃದ್ಧಿಯಾಗಬೇಕು ಎಂಬ ಚಿಂತನೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿದೆ. ಕೇವಲ ಓಟಿಗೋಷ್ಕರ ಧರ್ಮ ಸಂಘರ್ಷ, ಭಾವನಾತ್ಮಕ ವಿಚಾರಗಳು, ಸುಳ್ಳು ಪ್ರಚಾರಗಳ ಮೂಲಕ ಕೀಳು ಅಭಿರುಚಿಯ ಬಿಜೆಪಿ ದೇಶವನ್ನು ವಿನಾಶದತ್ತ ಕೊಂಡುಹೋಗುತ್ತಿದೆ. ಹಾಗಾಗಿ ಈ ಬಾರಿ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮೂಲಕ ದೇಶ ಹಾಗೂ ಸಂವಿಧಾನವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಅಧಿಕಾರವನ್ನು ಕಬಳಿಸಿ ಆಡಳಿತ ನಡೆಸಿದ ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 40 ಪರ್ಸೆಂಟ್ ಕಮಿಷನ್ ಪಡೆಯುವ ಈ ಬಿಜೆಪಿ ಸರಕಾರದ ಬಗ್ಗೆ ಜನತೆ ಬೇಸತ್ತು ಹೋಗಿದ್ದು, ಕಾಂಗ್ರೆಸ್ಸಿಗೆ ಬಹುಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಆರು ಮಂದಿ ಬಿಜೆಪಿಯ ನಾಯಕರು ಅನೈತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಯಾಕೆ ಎಂಬುದನ್ನು ಮತದಾರರಿಗೆ ತಿಳಿಸಿಬೇಕು ಎಂದು ಆಗ್ರಹಿಸಿದರು.
ಮಿನಿ ವಿಧಾನಸೌಧ, ಮೆಸ್ಕಾಂ ಕಚೇರಿ ಕಟ್ಟಡ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಡಿಪೋ, ಬಿ ಸಿ ರೋಡಿನ ಟ್ರೀ ಪಾರ್ಕ್, ಸರಕಾರಿ ಕಾಲೇಜು, ಪಾಲಿಟೆಕ್ನಿಕ್, ಸುಸಜ್ಜಿತ ಆಸ್ಪತ್ರೆ, ಅಂಬೆಡ್ಕರ್ ಭವನ, ನಿರೀಕ್ಷಣಾ ಬಂಗಲೆ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಸಚಿವ ರಮಾನಾಥ ರೈ ಅವರು ಮಾಡಿದ್ದಾರೆ, ಅದರೆ ಬಿಜೆಪಿಯವರಿಗೆ ಮಾತ್ರ ಕಣ್ಣಿಗೆ ಕಾಣಿಸುತ್ತಿಲ್ಲ, ಕೇವಲ ಚೋಟುದ್ದ ರಸ್ತೆ ಮಾಡಿ ಅದನ್ನೇ ಮಹಾ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಈ ಸಂದರ್ಭ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಮಾಜಿ ಸದಸ್ಯ ಅಬ್ದುಲ್ ಲತೀಫ್ ವಗ್ಗ, ಲೋಕೇಶ್ ಪೂಜಾರಿ ಸರಪಾಡಿ, ರಮೇಶ್ ಪಣೋಲಿಬೈಲು ಜೊತೆಗಿದ್ದರು.
0 comments:
Post a Comment