ಬಂಟ್ವಾಳ, ಎಪ್ರಿಲ್ 14, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಬೈಪಾಸಿನಲ್ಲಿ 2003ರಲ್ಲಿ ಆರಂಭಗೊಂಡ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಇದೀಗ 20ನೇ ವರ್ಷದ ಸಂಭ್ರಮದಲ್ಲಿದ್ದು, 92.60 ಲಕ್ಷ ರೂಪಾಯಿ ನಿವ್ವಳ ಲಾಭ ಹೊಂದಿ ಮುನ್ನಡೆಯುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದರು.
ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2003 ರ ಡಿಸೆಂಬರ್ 3 ರಂದು ಸುಮಾರು 460 ಮಂದಿ ಸದಸ್ಯರಿಂದ 4.02 ಲಕ್ಷ ರೂಪಾಯಿ ಪಾಲು ಬಂಡವಾಳ, ಸುಮಾರು 2 ಲಕ್ಷ ರೂಪಾಯಿ ಠೇವಣಿಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಉದ್ದೇಶವನ್ನಿಟ್ಟುಕೊಂಡು ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಿರುವ ಬಂಟ್ವಾಳ ವರ್ತಕರ ಸಹಕಾರಿ ಸಂಘ ಕಳೆದ ವರ್ಷ ವ್ಯವಹಾರ ಕ್ಷೇತ್ರವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದು, ಮೂಡಬಿದ್ರೆ ತಾಲೂಕಿನ ಅಲಂಗಾರು ಹಾಗೂ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ 2 ಶಾಖೆಗಳು ಸೇರಿ ಬಂಟ್ವಾಳ ತಾಲೂಕಿನ ವಿವಿಧ ಹೋಬಳಿ ಮಟ್ಟದ ನಗರ ಪ್ರದೇಶಗಳಲ್ಲಿ 10 ಶಾಖೆಗಳೊಂದಿಗೆ ಒಟ್ಟು 12 ಶಾಖೆಗಳನ್ನು ನಡೆಸುತ್ತಿದೆ. ಈಗಾಗಲೇ ಬಂಟ್ವಾಳ ತಾಲೂಕಿನ ಪೆರ್ನೆ ಎಂಬಲ್ಲಿ ಶಾಖೆ ತೆರೆಯಲು ಇಲಾಖಾ ಅನುಮತಿ ಪಡೆಯಲಾಗಿದ್ದು, ಮುಂದಿನ ಮೇ ತಿಂಗಳಲ್ಲಿ ಈ ಶಾಖೆಯೂ ಆರಂಭಗೊಳ್ಳಲಿದೆ ಎಂದರು.
ಸಂಸ್ಥೆಯು ಈಗಾಗಲೇ 5978 ಮಂದಿ ಸದಸ್ಯರಿದ್ದು, ಸುಮಾರು 20 ಸಾವಿರಕ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ. 1.45 ಕೋಟಿ ಪಾಲು ಬಂಡವಾಳ, 1.98 ಕೋಟಿ ಕ್ಷೇಮ ನಿಧಿ, ಕಟ್ಟ ನಿಧಿ ಹಾಗೂ ಇತರ ನಿಧಿಗಳೊಂದಿಗೆ ಸುಮಾರು 52.54 ಕೋಟಿ ಠೇವಣಿಯೊಂದಿಗೆ 55 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದೆ ಎಂದ ಜೈನ್ ಸಂಸ್ಥೆಗೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಹಾಗೂ ಬೆಂಜನಪದವಿನಲ್ಲ್ಲಿ 50 ಲಕ್ಷದಷ್ಟು ಮೌಲ್ಯದ ಸ್ವಂತ ಕಟ್ಟಡವಿದ್ದು, ಈಗಾಗಲೇ 85.95 ಲಕ್ಷ ಕ್ಷೇಮ ನಿಧಿಯನ್ನು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲಿ ಖಾಯಂ ಠೇವಣಿಯಾಗಿರಿಸಿದೆ ಎಂದರು.
ಸಂಸ್ಥೆಗೆ 20 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಈ ವರ್ಷ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ಸಹಕಾರಿ ಕ್ಷೇತ್ರದ ಸಿಬ್ಬಂದಿಗಳಿಗೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಡಿಸೆಂಬರ್ ತಿಂಗಳಲ್ಲಿ ಸಂಭ್ರಮದ ಅವಿಸ್ಮರಣೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದ ಸುಭಾಶ್ಚಂದ್ರ ಜೈನ್ ಸಂಸ್ಥೆಯ ಆರ್ಥಿಕ ವ್ಯವಹಾರಗಳ ನಿರ್ವಹಣೆಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿ ಒಟ್ಟು 24 ಮಂದಿ ಖಾಯಂ ಸಿಬ್ಬಂದಿಗಳು ಹಾಗೂ 14 ಜನ ಗುತ್ತಿಗೆ ಆಧಾರ ನೆಲೆಯಲ್ಲಿ ಮತ್ತು 15 ಮಂದಿ ಪಿಗ್ನಿ ಸಂಗ್ರಾಹಕರು ಉತ್ತಮ ಕಾರ್ಯಕ್ಷಮತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಶ್ರೀಮತಿ ಸ್ವಪ್ನರಾಜ್, ರಾಜೇಶ್ ಬಿ, ಜೆ ಗಜೇಂದ್ರ ಪ್ರಭು, ದಿವಾಕರ ದಾಸ್, ಶ್ರೀಮತಿ ವಿಜಯಾ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ ಹಾಗೂ ನಾರಾಯಣ ಸಿ ಪೆರ್ನೆ ಉಪಸ್ಥಿತರಿದ್ದರು.
0 comments:
Post a Comment