ಕಡಬ, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ಟ್ಯೂಶನಿಗೆಂದು ಹೋದ ಶಾಲಾ ಬಾಲಕ ನಾಪತ್ತೆಯಾಗಿ ಮರುದಿನ ಕುಮಾರಾಧಾರಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ತಾಲೂಕು ಎಡಮಂಗಲ ಗ್ರಾಮದ ನಾಕೂರು ಕಯ ಎಂಬಲ್ಲಿ ನಡೆದಿದೆ.
ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ನಿವಾಸಿ ಮಂಜುನಾಥ ಎಂಬವರ ಮಗ ಅದ್ವೈತ್ ಶೆಟ್ಟಿ ಎನ್ ಎಂ (16) ಎಂಬಾತನೇ ನೀರಿಗೆ ಬಿದ್ದು ಮೃತಪಟ್ಟ ಶಾಲಾ ಬಾಲಕ. ಈತ ಬುಧವಾರ (ಮಾ 29) ಸಂಜೆ ಕಡಬದಲ್ಲಿರುವ ಟ್ಯೂಶನ್ ಕ್ಲಾಸಿಗೆಂದು ಹೋಗಿದ್ದು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಈತನನ್ನು ಮನೆ ಮಂದಿ ಹುಡುಕಾಟದಲ್ಲಿದ್ದ ವೇಳೆ ಮರುದಿನ ಗುರುವಾರ (ಮಾ 30) ಕಡಬ ತಾಲೂಕು ಎಡಮಂಗಲ ಗ್ರಾಮದ ನಾಕೂರು ಕಯ ಎಂಬಲ್ಲಿ ಹರಿಯುವ ಕುಮಾರಧಾರಾ ನದಿಯ ದಂಡೆಯಲ್ಲಿ ಅದ್ವೈತ್ ಶೆಟ್ಟಿಯ ಶಾಲಾ ಬ್ಯಾಗ್ ಪತ್ತೆಯಾಗಿರುತ್ತದೆ. ಇದರಿಂದ ಸಂಶಯಗೊಂಡು ಆಗ್ನಿ ಶಾಮಕ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಹುಡುಕಾಟ ನಡೆಸಿದಾಗ ನದಿಯ ನೀರಿನ ಆಳದಲ್ಲಿ ಅದ್ವೈತ್ ಶೆಟ್ಟಿಯ ಮೃತದೇಹ ಗುರುವಾರ ಮಧ್ಯಾಹ್ನ 12-15 ರ ಸುಮಾರಿಗೆ ಪತ್ತೆಯಾಗಿದೆ.
ಸಂಜೆ ಟ್ಯೂಶನ್ ಮುಗಿಸಿ ಬಂದ ಬಾಲಕ ಅದ್ವೈತ್ ಶೆಟ್ಟಿ ಹೊಳೆಯ ನೀರಿನಲ್ಲಿ ಕೈಕಾಲು ತೊಳೆಯಲು ಅಥವಾ ದೇವರ ಮೀನು ನೋಡಲು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮನೆ ಮಂದಿ ಶಂಕಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 08/2023 ಕಲಂ 174 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment