ಮಾರ್ಚ್ 10 ರಂದು 14 ದಿನಗಳ ಬಂಟ್ವಾಳ ಪ್ರಜಾಧ್ವನಿ ಯಾತ್ರೆಗೆ ಚಾಲನೆ : ಪಿಯೂಸ್ ರೋಡ್ರಿಗಸ್
ಬಂಟ್ವಾಳ, ಮಾರ್ಚ್ 08, 2023 (ಕರಾವಳಿ ಟೈಮ್ಸ್) : ಕಫ್ರ್ಯೂ, ನಿಷೇಧಾಜ್ಞೆಗಳನ್ನು ಉಲ್ಲಂಘಿಸಿ, ಕಾನೂನು ಮೀರಿ, ಪೊಲೀಸರ ಸೂಚನೆ-ಆದೇಶಗಳನ್ನೂ ಮೀರಿ ಪ್ರತಿಭಟನೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಹಾಕಿದವರಿಂದಲೇ ಇದೀಗ ಶಾಂತಿಯ ನೀತಿ ಪಾಠ ಕೇಳಬೇಕಾದ ದುಸ್ಥಿತಿ ಬಂಟ್ವಾಳ ಕ್ಷೇತ್ರದ ಜನರ ಪಾಲಿಗೆ ಒದಗಿ ಬಂದಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕಟಕಿಯಾಡಿದರು.
ಬುಧವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆಲದ ಕಾನೂನಿಗೆ ಬೆಲೆ ನೀಡದೆ ಅಶಾಂತಿ, ಗಲಭೆ ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಉಂಟುಮಾಡಿ ಅಧಿಕಾರಕ್ಕೇರಿದ ಮಂದಿಗಳು ಇವತ್ತು ಮಾಜಿ ಪೊಲೀಸ್ ಅಧಿಕಾರಿಯನ್ನು ಕರೆಸಿ ಶಾಂತಿಯ ಜಪ ಮಾಡುತ್ತಿರುವುದು ಈ ನೆಲದ ದುರಂತ ಎಂದು ವಿಮರ್ಶಿಸಿದರು.
ಮತೀಯ ಸಂಘಟನೆಗಳು ಘರ್ಷಣೆ, ಕೊಲೆ ಕೃತ್ಯಗಳನ್ನು ನಡೆಸಿ ಸಮಾಜದಲ್ಲಿ ಅಲ್ಲಲೋಲ-ಕಲ್ಲೋಲ ಸೃಷ್ಟಿಸಿ ಹಾಕಿದ್ದಾರೆ. ಬಳಿಕ ಕೊಲೆಗಡುಕರೊಂದಿಗೆ ತಿರುಗಾಡುವ ಮೂಲಕ ಅವರಿಗೆ ಬೆಂಬಲವನ್ನೂ ನೀಡಿದ್ದಾರೆ. ಆದರೆ ಇದುವರೆಗೆ ನಡೆದ ಯಾವುದೇ ಗಲಭೆ ಅಥವಾ ಕೊಲೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಪೊಲೀಸ್ ಎಫ್ ಐ ಆರ್ ನಲ್ಲಿ ದಾಖಲಾಗಿಲ್ಲ. ಈ ಬಗ್ಗೆ ಏನಾದರೂ ಇದೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ರಮಾನಾಥ ರೈ ಸವಾಲು ಹಾಕಿದರು.
ನಾನು ನನ್ನ ಅವಧಿಯಲ್ಲಿ ಚಾಲೆಂಜ್ ಹಾಕಿ ಮಂಜೂರು ಮಾಡಿಸಿಕೊಂಡು ಬಂದ ಮಹತ್ವದ ಒಳಚರಂಡಿ ಯೋಜನೆಗೆ ಆರು ವರ್ಷ ಕಳೆದರೂ ಇನ್ನೂ ಚಾಲನೆಯೇ ಮಾಡಲು ಆಗದ ಹಾಲಿ ಬಂಟ್ವಾಳದ ಶಾಸಕರು ನನ್ನ ಮೇಲೆ ಮರಳು ಮಾಫಿಯಾ ಎಂದು ಆರೋಪ ಮಾಡಿದ್ದಉ ಬಿಟ್ಟರೆ ಅದಕ್ಕೆ ಇದುವರೆಗೂ ದಾಖಲೆ ನೀಡಲು ಸಾಧ್ಯವಾಗಿಲ್ಲ. ಆದರೆ ಇವತ್ತು ಹಾಲಿ ಶಾಸಕರಿಗೆ ಅಭಿನಂದನೆ ಬ್ಯಾನರ್ ಹಾಕುವವರೆಲ್ಲರೂ ಮರಳು ಮಾಫಿಯಾ, ಇಸ್ಪೀಟ್ ದಂಧೆಕೋರರು ಆಗಿದ್ದಾರೆ ಎಂದು ಕಿಡಿ ಕಾರಿದ ರೈ ಕರ್ನಾಟಕ ಸರಕಾರದಲ್ಲಿ ಬರೋಬ್ಬರಿ 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದು, ದ ಕ ಜಿಲ್ಲೆಯಲ್ಲಿ ಇತಿಹಾಸ. ಅಭಿವೃದ್ದಿ ಕಾಮಗಾರಿಯಲ್ಲೂ ಬಂಟ್ವಾಳ ಕ್ಷೇತ್ರ ಇತಿಹಾಸವನ್ನು ಕಂಡಿದೆ. ನನ್ನ ಅವಧಿಯಲ್ಲಿ 20 ಸಾವಿರ ಮಂದಿಗೆ ಹಕ್ಕು ಪತ್ರ ನೀಡಿ ಸ್ವಾಭಿಮಾನದ ಬದುಕು ಕಲ್ಪಿಸಿದ್ದೇನೆ. ಆದರೆ ಇದೀಗ ಜುಜುಬಿ 1 ಸಾವಿರ ಹಕ್ಕು ಪತ್ರ ನೀಡಿ ಆಕಾಶದಿಂದ ಇಳಿದು ಬಂದವರಂತೆ ಎದೆಯುಬ್ಬಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಅಭಿವೃದ್ದಿಯಲ್ಲಿ ನಾನು ಯಾವತ್ತೂ ಸೋತಿಲ್ಲ, ಸೋಲಿನಿಂದ ನಾನು ಎದೆಗುಂದಲೂ ಇಲ್ಲ. ವಿರೋಧಿಗಳ ಅಪಪ್ರಚಾರ, ಸುಳ್ಳಿನ ಕಂತೆಗಳಿಂದ ನನಗೆ ತಾತ್ಕಾಲಿಕ ಸೋಲಾಗಿರಬಹುದು. ಆದರೆ ಸತ್ಯ ಎಂದಿಗೂ ಸಾಯುವುದಿಲ್ಲ ಎಂದು ಮತ್ತೊಮ್ಮೆ ಬಂಟ್ವಾಳದಲ್ಲಿ ಗೆದ್ದು ಬಂದು ಅಭಿವೃದ್ದಿಯನ್ನು ಮಾತ್ರ ಮಾತಿನಲ್ಲಿ ಹೇಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಮಾರ್ಚ್ 10 ರಿಂದ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಆರಂಭವಾಗಲಿದ್ದು, ಪ್ರತಿ ದಿನ ಮೂರು ಗ್ರಾ ಪಂ ವ್ಯಾಪ್ತಿಯಲ್ಲಿ ಈ ಯಾತ್ರೆ ನಡೆಯಲಿದೆ. ಪ್ರತಿ ದಿನ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ಹಿರಿಯ ನಾಯಕರು, ಭಾಷಣಗಾರರು ಭಾಗವಹಿಸಿ ಕಾಂಗ್ರೆಸ್ ಸಾಧನೆ ಬಗ್ಗೆ ಜನರಿಗೆ ತಿಳಿಸುವರು. ಮಾರ್ಚ್ 23 ರಂದು ಯಾತ್ರೆ ಸಮಾಪ್ತಿಗೊಳ್ಳಲಿದೆ ಎಂದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಸುರೇಶ್ ಪೂಜಾರಿ ಜೋರಾ, ಇಬ್ರಾಹಿಂ ನವಾಝ್ ಬಡಕಬೈಲು, ಮಧುಸೂಧನ್ ಶೆಣೈ, ಚಂದ್ರಶೇಖರ ಭಂಡಾರಿ, ಸದಾಶಿವ ಬಂಗೇರ, ಶಬೀರ್ ಸಿದ್ದಕಟ್ಟೆ, ಡೆಂಝಿನ್ ನೊರೊನ್ಹಾ ಅಲ್ಲಿಪಾದೆ, ತಿಲಕ್ ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment