ಮಂಗಳೂರು, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದಿಂದ ಯೆನಪೋಯಾ ಡೀಮ್ಡ್ ಯುನಿವರ್ಸಿಟಿಗೆ ‘ಪ್ರೊಜೆಕ್ಟ್ ಮಂಗಳ’ ದ ವಿಸ್ತರಣೆಯಾಗಿದ್ದು, ಯೆನಪೋಯಾ ಯುನಿವರ್ಸಿಟಿಯ ಅಧೀನದ ಎಲ್ಲಾ 11 ಕಾಲೇಜುಗಳ ಅಂತಿಮ ವರ್ಷದ ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೇಟ್ ಗಳು ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮೂಲಕ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಲಿದೆ.
ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗವು ಮಂಗಳೂರಿನ ಯೆನೆಪೋಯಾ ಯುನಿವರ್ಸಿಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮೂಲಕ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿಗಳು, ಡಿಗ್ರಿ/ ಡಿಪೆÇ್ಲೀಮಾ ಸರ್ಟಿಫಿಕೇಟ್ ಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆ-ಪ್ರಾಜೆಕ್ಟ್ ಮಂಗಳ ಯೋಜನೆಯನ್ನು ಮಂಗಳೂರಿನ ದೇರಳಕಟ್ಟೆಯ ಯೆನೆಪೋಯಾ ಕಾಲೇಜಿನಲ್ಲಿ ಗುರುವಾರ ಆರಂಭಿಸಿದೆ.
ಕಳೆದ ಅಕ್ಟೋಬರ್ 13 ರಂದು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು (ಕೆಪಿಟಿ) ನಲ್ಲಿ ಈ ಸೇವೆಗೆ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಚಾಲನೆ ನೀಡಲಾಗಿದ್ದು, ಇಂದು ಈ ಉಪಕ್ರಮದೊಂದಿಗೆ, ಮಂಗಳೂರಿನಲ್ಲಿ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿಗಳು, ಡಿಗ್ರಿ/ ಡಿಪೆÇ್ಲೀಮಾ ಸರ್ಟಿಫಿಕೇಟ್ ಗಳನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಸೇವೆಯ ವಿಸ್ತರಣೆಗೆ ಮೊದಲ ಹೆಜ್ಜೆ ಇಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯಾ ಯುನಿವರ್ಸಿಟಿಯ ಉಪಕುಲಪತಿ ಡಾ ಎಂ ವಿಜಯ್ ಕುಮಾರ್, ರಿಜಿಸ್ಟ್ರಾರ್ ಗಳಾದ ಡಾ ಗಂಗಾಧರ ಸೋಮಯಾಜಿ, ಪರೀಕ್ಷೆಯ ನಿಯಂತ್ರಕರಾದ ಡಾ ಬಿ ಟಿ ನಂದಿಶ್ ಅವರು ಹಾಗೂ ಭಾರತೀಯ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ‘ಪ್ರಾಜೆಕ್ಟ್ ಮಂಗಳ’ ಲೋಗೊ ಅನಾವರಣಗೊಳಿಸಿದರು.
ಮುಂದಿನ ದಿನಗಳಲ್ಲಿ ಯೆನೆಪೋಯಾ ಯುನಿವರ್ಸಿಟಿಯ ಅಧೀನದ ಎಲ್ಲಾ 11 ಕಾಲೇಜುಗಳ ಅಂರ್ತಿಮ ವರ್ಷದ ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೇಟ್ ಗಳು ಸ್ಪೀಡ್ ಪೋಸ್ಟ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಲಿದೆ. ಈ ಬಗೆಗಿನ ಒಪ್ಪಂದಕ್ಕೆ ಇಂದು ಯೆನೆಪೋಯಾ ಯುನಿವರ್ಸಿಟಿಯಲ್ಲಿ ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಯೆನೆಪೋಯಾ ಯುನಿವರ್ಸಿಟಿಯ ಪರೀಕ್ಷೆಯ ನಿಯಂತ್ರಕ ಡಾ ಬಿ ಟಿ ನಂದಿಶ್ ಅವರಿಗೆ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭ ಯೆನೆಪೋಯಾ ಯುನಿವರ್ಸಿಟಿಯ ಹಣಕಾಸು ಅಧಿಕಾರಿ ಅಬ್ದುಲ್ ಮೊಹಸಿನ್, ಮಂಗಳೂರಿನ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ, ಮಂಗಳೂರಿನ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳಾದ ಶಂಕರ್ ಕೆ ಹಾಗೂ ಸುಭಾಷ್ ಪಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಅಂಚೆ ಇಲಾಖೆ ಈಗಾಗಲೇ ವಿವಿಧ ಸರಕಾರಿ ದಾಖಲೆಗಳು, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಾನ್ ಕಾರ್ಡ್, ವೋಟರ್ ಐಡಿ, ಜನನ/ ಮರಣ ಪ್ರಮಾಣ ಪತ್ರ, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್ ಬುಕ್ ಮುಂತಾದ ಲಕ್ಷಾಂತರ ದಾಖಲೆಗಳನ್ನು ಹಲವು ವರ್ಷಗಳಿಂದ ಪ್ರತಿದಿನ ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಈಗ ಎಲ್ಲಾ ಬಗೆಯ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಿಸಲು ಮುಂದಾಗಿದೆ.
ಪ್ರಸ್ತುತ ಪಿಯುಸಿ ಸೇರಿದಂತೆ, ಪದವಿ, ಉನ್ನತ ಪದವಿಗಳ ಅಂತಿಮ ಸೆಮಿಸ್ಟರ್ ಹಾಗೂ ಪದವಿಯ /ಉನ್ನತ ಪದವಿಯ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳು ಕಾಲೇಜು ಮುಗಿಸಿದ ಕೆಲ ತಿಂಗಳುಗಳ ನಂತರ ಮುದ್ರಣಗೊಂಡು ಕಾಲೇಜುಗಳಿಗೆ ರವಾನಿಸಲ್ಪಡುವುದರಿಂದ ವಿದ್ಯಾರ್ಥಿಗಳು ದೂರದ ಸ್ಥಳದಿಂದ ಇದನ್ನು ಪಡೆದುಕೊಳ್ಳುವುದಕ್ಕಾಗಿಯೇ ಕಾಲೇಜು, ಕೆಲಸಕ್ಕೆ ರಜೆ ಹಾಕಿ ಬರಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ಇದೀಗ ವಿದ್ಯಾರ್ಥಿಗಳ ಅನಾನುಕೂಲತೆಗಳನ್ನು ನಿವಾರಿಸಲು, ಅಂಚೆ ಇಲಾಖೆಯ ಈ ಹೊಸ ಯೋಜನೆ ಸಹಕಾರಿಯಾಗಲಿದೆ.
ಈ ಸೇವೆಯ ವಿಶೇಷತೆಗಳೆಂದರೆ, ಈ ಪ್ರಮಾಣ ಪತ್ರ/ ಅಂಕ ಪಟ್ಟಿಗಳನ್ನು ಭಾರತದ ಯಾವುದೇ ಊರಿಗೂ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು, ಬಟವಾಡೆಯಾಗಬೇಕಾಗಿರುವ ವಿಳಾಸವು ಕಾಲೇಜಿನ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು, ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು, ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು, ಈ ಸರ್ಟಿಫಿಕೇಟ್/ ಅಂಕಪಟ್ಟಿಯನ್ನು ಸ್ಪೀಡ್ ಪೋಸ್ಟ್ ಮೂಲಕ 2 ರಿಂದ 5 ದಿನಗಳ ಒಳಗಾಗಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು, ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕ ಮಾಹಿತಿ ನೀಡಲಾಗುವುದು, ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆ ಯಾವ ಹಂತದಲ್ಲಿದೆ ಎಂದು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ನೋಡಬಹುದು.
ಅಂಚೆ ಇಲಾಖೆಯು ಈಗಾಗಲೇ ಮಂಗಳೂರಿನ ಇತರ ಎಲ್ಲಾ ಪಿಯುಸಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಬಗೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳಿಂದ ಧನಾತ್ಮಕ ಉತ್ತರ ಬರುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆದು ಮರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಸೇವೆ ವರದಾನವಾಗಲಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.
0 comments:
Post a Comment