ಬಂಟ್ವಾಳ, ಮಾರ್ಚ್ 26, 2023 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ ಪ್ರಪ್ರಥಮ ಕಂಬಳವಾಗಿ ಆರೋಜನೆಗೊಂಡಿರುವ ನರಿಂಗಾನ-ಮೋರ್ಲ ಲವ-ಕುಶ ಜೋಡುಕರೆ ಬಯಲು ಕಂಬಳದ ಅಧ್ಯಕ್ಷರಾಗಿ ಮಾಜಿ ಸಚಿವ, ಶಾಸಕ ಯು ಟಿ ಖಾದರ್ ನೇತೃತ್ವ ವಹಿಸಿರುವುದು ಕಂಬಳ ಆಯೋಜನಾ ಕೂಟದ ಮೊದಲ ಮುಸ್ಲಿಂ ಅಧ್ಯಕ್ಷ ಎಂಬ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಬಣ್ಣಿಸಿದರು.
ಯು ಟಿ ಖಾದರ್ ಹಾಗೂ ಪ್ರಶಾಂತ್ ಕಾಜವ ಅವರ ನೇತೃತ್ವದಲ್ಲಿ ನರಿಂಗಾನದಲ್ಲಿ ಆಯೋಜಿಸಲಾಗಿದ್ದ ಲವ-ಕುಶ ಜೋಡುಕರೆ ಕಂಬಳ ಕೂಟದಲ್ಲಿ ಶನಿವಾರ ರಾತ್ರಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಆಯೋಜನೆಗೊಳ್ಳುತ್ತಿರುವ ಮೂಡೂರು-ಪಡೂರು ಬಂಟ್ವಾಳ ಕಂಬಳದ ಅಧ್ಯಕ್ಷರಾಗಿ ಪಿಯೂಸ್ ಎಲ್ ರೋಡ್ರಿಗಸ್ ನೇತೃತ್ವ ವಹಿಸಿದ್ದು, ಕ್ರೈಸ್ತ ವ್ಯಕ್ತಿ ಕಂಬಳ ಕೂಟದ ಅಧ್ಯಕ್ಷರಾಗಿ ನೇತೃತ್ವ ವಹಿಸಿರುವುದೂ ಕಂಬಳ ಕೂಟದ ಇತಿಹಾಸದಲ್ಲಿ ಪ್ರಥಮ. ತುಳುನಾಡಿನ ಜನಪ್ರಿಯ ಜನಪದ ಕ್ರೀಡೆಯಾಗಿರುವ ಕಂಬಳ ಕೂಟದಲ್ಲಿ ಮುಸ್ಲಿಂ-ಕ್ರೈಸ್ತರೂ ನೇತೃತ್ವ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಸಾಮಾಜಿಕ ಸಾಮರಸ್ಯದ ಸಂಕೇತ ಎಂದು ಕೊಂಡಾಡಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ಮಾಜಿ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಯೇನಪೋಯ ಮೆಡಿಕಲ್ ಕಾಲೇಜು ಮುಖ್ಯಸ್ಥ ಫರಾದ್, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ ಇಫ್ತಿಕಾರ್ ಅಲಿ, ಬಂಟ್ವಾಳ ತಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಪ್ರಮುಖರಾದ ಜಲೀಲ್ ಮೋಂಟುಗೋಳಿ, ಝುಬೈರ್ ತಲೆಮೊಗರು ಮೊದಲಾದವರು ಭಾಗವಹಿಸಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಯು ಟಿ ಖಾದರ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ವಂದಿಸಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment