ಮಂಗಳೂರು, ಮಾರ್ಚ್ 23, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟಿಗಾಗಿ ಅಲ್ಪಸಂಖ್ಯಾತ ನಡುವೆ ಸ್ಪರ್ಧೆ ಏರ್ಪಟ್ಟು ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಲೇ ಟಿಕೆಟ್ ಗಾಗಿ ವಿಶೇಷ ಲಾಬಿ ಮುಂದುವರಿಸಿದರೆ, ಇತ್ತ ಕೆಪಿಸಿಸಿ ಕಾರ್ಯದರ್ಶೀ ಇನಾಯತ್ ಅಲಿ ಮುಲ್ಕಿ ಅವರು ಕ್ಷೇತ್ರದಲ್ಲಿ ಸಂಚಾರ ನಾಯಕರ ಭೇಟಿ ಮಾಡಿ ಟಿಕೆಟ್ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ.
ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಜಿ ಸಚಿವ, ರಾಜಕೀಯ ಭಗೀರಥ ಬಿ ರಮಾನಾಥ ರೈ ಅವರಿಗೆ ಅನುಸರಿಸಿದ ನೀತಿಯನ್ನೇ ಇಲ್ಲೂ ಅನುಸರಿಸುವ ಬಗ್ಗೆ ಕೈ ಪಕ್ಷದ ನಾಯಕರು ಒಲವು ತೋರಿದ್ದು, ಇದು ಬಾವಾಗೆ ವರವಾಗಿ ಪರಣಮಿಸಲಿದೆ ಎನ್ನಲಾಗಿದೆ. ಬಂಟ್ವಾಳದಲ್ಲಿ ಟಿಕೆಟ್ ಗಾಗಿ ಘಟಾನುಘಟಿ ನಾಯಕರ ಲಾಬಿ ಇತ್ತಾದರೂ ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕವೂ ಧೃತಿಗೆಡದೆ ಕಳೆದ ಐದು ವರ್ಷಗಳಿಂದ ರೈ ಅವರು ಕ್ಷೇತ್ರದ ಜನರ ಜೊತೆ ಇಟ್ಟುಕೊಂಡಿರುವ ಒಡನಾಟ, ಕ್ಷೇತ್ರಾದ್ಯಂತ ನಡೆಸಿಕೊಂಡು ಬಂದಿದ್ದ ಮಿಂಚಿನ ಸಂಚಾರಕ್ಕೆ ಮಣೆ ಹಾಕಿದ ಹೈಕಮಾಂಡ್ ಮತ್ತೊಮ್ಮೆ ರಮಾನಾಥ ರೈ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ಸ್ವತಃ ರೈ ಅವರು ಇದು ತನ್ನ ಕೊನೆಯ ಅಸೆಂಬ್ಲಿ ಚುನಾವಣೆ ಎಂದು ತಾವೇ ಘೋಷಿಸಿಕೊಂಡು ಪ್ರಸ್ತುತ ಚುನಾವಣಾ ರಂಗ ತಾಲೀಮು ಆರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಮೊಯಿದಿನ್ ಬಾವಾ ಕೂಡಾ ಟಿಕೆಟ್ ಪೈಪೋಟಿಯ ಕಾರಣಕ್ಕಾಗಿ ನಾಯಕರ ಮನವೊಲಿಕೆಗೆ ಕೆಲವೊಂದು ಮಾರ್ಗಗಳನ್ನು ಕಂಡುಕೊಂಡಿದ್ದರೂ, ಕ್ಷೇತ್ರದ ಜನತೆಯ ಒಡನಾಟ ಎಂದೂ ಕಳೆದುಕೊಂಡಿಲ್ಲ. ನಿರಂತರವಾಗಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಲೇ ಬಂದಿದ್ದಾರೆ. ಇದೀಗ ಇವರ ಕ್ಷೇತ್ರದ ಮೇಲಿನ ಹಿಡಿತವೇ ಭಾರೀ ಪೈಪೋಟಿಯ ನಡುವೆಯೂ ಟಿಕೆಟ್ ಫೈನಲ್ ಹಂತಕ್ಕೆ ತಂದು ನಿಲ್ಲಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡ ಪೈಕಿ ಬಾವಾ ಕೂಡಾ ಸೋಲುಂಡಿದ್ದರು. ಆದರೂ ಕೂಡಾ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವಿನ ಒಡನಾಟವನ್ನು ಒಂದು ದಿನವೂ ಬಿಟ್ಟಿರಲಿಲ್ಲ. ಐದು ವರ್ಷಗಳಲ್ಲೂ ಕ್ಷೇvತ್ರ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳು, ಜನರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುವ ಮೂಲಕ ಜನರ ಮಧ್ಯೆಯೇ ತೊಡಗಿಸಿಕೊಂಡಿದ್ದರು. ರಾಜಕೀಯ ಸ್ಥಾನಮಾನಕ್ಕಿಂತ ಹೆಚ್ಚಾಗಿ ಜನರ ಮಧ್ಯೆ ಸೇವಾ ಮನೋಭಾವದೊಂದಿಗೆ ಬೆರೆತುಕೊಂಡ ಹಿನ್ನಲೆಯಲ್ಲಿ ಇದೀಗ ಬಾವಾ ಅವರು ಮತ್ತೊಮ್ಮೆ ಪಕ್ಷದ ನಾಯಕರಿಂದ ಟಿಕೆಟ್ ಗ್ರೀನ್ ಸಿಗ್ನಲ್ ಪಡೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎನ್ನಲಾಗುತ್ತಿದೆ.
ಈ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟಿಕೆಟ್ ಜಂಜಾಟ ಜೋರಾಗಿದ್ದು, ರಾಜ್ಯ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ ಇದೀಗ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಆಖಾಡಕ್ಕಿಳಿದಿದ್ದು, ಮೊಯಿದಿನ್ ಬಾವಾ ಪರ ಒಲವು ಹೊಂದಿ ಟಿಕೆಟ್ ಘೋಷಣೆ ಫೈನಲ್ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದ್ದು, ಖರ್ಗೆ ಪುತ್ರ ರಾಜ್ಯ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಕೂಡಾ ಬಾವಾ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೈ ಪಕ್ಷದ ಮುಂಚೂಣಿ ಘಟಕದ ನಾಯಕರು ಕೂಡಾ ಅನ್ಯರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ, ಬಾವಾ ಪರ ಬ್ಯಾಟಿಂಗ್ ಮಾಡಿ ದೆಹಲಿ ಚಲೋ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ. ಕ್ಷೇತ್ರದ ಬ್ಲಾಕ್ ಅಧ್ಯಕ್ಷರುಗಳ ಸಹಿತ ತಳಮಟ್ಟದ ನಾಯಕರು ನಾಯಕರ ಭೇಟಿಗಾಗಿ ದೆಹಲಿಗೆ ಲಗ್ಗೆ ಇಟ್ಟಿದ್ದು, ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯವಾಗಿದ್ದು, ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸಿದ ಮತದಾರರ ಪೂರ್ಣ ಒಲವು ಗಳಿಸಿಕೊಂಡಿರುವ ಬಾವಾಗೆ ಟಿಕೆಟ್ ನೀಡಿದರೆ ಗೆಲುವುದು ಸುಲಭವಾಗಲಿದ್ದು, ಟಿಕೆಟ್ ಇತರರ ಪಾಲಾದರೆ ವಿರೋಧ ಪಕ್ಷದ ಗೆಲುವು ಸುಲಭವಾದಂತೆ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆ ಹತ್ತಿರ ಬರುತ್ತಿರುವಾಗಲಂತೂ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿ ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿ ತನ್ನ ದಿಸೆಯಲ್ಲಿ ಕಾರ್ಯಚಟುವಟಿಕೆ ಆರಂಭಿಸಿರುವ ಮೊಯಿದಿನ್ ಬಾವಾ ಅವರು ಕ್ಷೇತ್ರದಲ್ಲಿ ಸರ್ವ ಜನಾಂಗದ ಜನರ ಮನಸ್ಸನ್ನು ಗೆದ್ದುಕೊಳ್ಳುವ ಮೂಲಕ ಮತ್ತೆ ಕಾಂಗ್ರೆಸ್ ಪರ ಹವಾ ಸೃಷ್ಟಿಸುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲೂ ಎಲ್ಲೂ ಪಕ್ಷದ ಹಿರಿಯ ನಾಯಕರ ಹಿಂದಿನಿಂದ ಓಡಾಡಲು ಸಮಯ ವ್ಯರ್ಥ ಮಾಡದೆ ಕ್ಷೇತ್ರದ ಜನರ ಮನಸ್ಸಿನ್ನು ಮತ್ತೆ ಕಾಂಗ್ರೆಸ್ ಪರವಾಗಿ ಗೆದ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ರೂಪಿಸಿ ಅದರಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಮತ್ತೆ ಪ್ರಯತ್ನ ಚಾಲ್ತಿಯಲ್ಲಿಟ್ಟಿದ್ದಾರೆ ಬಾವಾ ಅವರು.
ಈ ಮಧ್ಯೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಗಮನಿಸುತ್ತಿರುವ ಹಿನ್ನಲೆಯಲ್ಲಿ ಮೊಯಿದಿನ್ ಬಾವಾ ಅವರೇ ಈ ಬಾರಿ ಕೈ ಅಭ್ಯರ್ಥಿಯಾಗುವ ಎಲ್ಲ ಲಕ್ಷಣ ಕಂಡು ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಆಗಿರುವ ಮಾಜಿ ಸಚಿವ ಬಿ ರಮಾನಾಥ ರೈ ಅವರ ಬಗ್ಗೆ ಪಕ್ಷದ ನಾಯಕರು ಕೈಗೊಂಡ ತೀರ್ಮಾನ ಕೂಡಾ ಬಾವಾ ಪರವಾಗಿ ಅಲೆಯೆಬ್ಬಿಸಲು ಕಾರಣವಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಒಂದೆರೆಡು ದಿನಗಳಲ್ಲಿ ಇಲ್ಲಿನ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಂಜಾಟದ ಕಾರಣಕ್ಕೆ ಚುನಾವಣೆ ಘೋಷಣೆಯಾಗುವವರೆಗೂ ಟಿಕೆಟ್ ಘೋಷಣೆ ಮುಂದೂಡಿ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಈಗಾಗಲೇ ಆರಂಭದಲ್ಲೇ ಟಿಕೆಟ್ ಘೋಷಣೆಯಾಗಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಅವರೇ ಬಂಟ್ವಾಳಕ್ಕೆ ಸೈ ಎಂದಿರುವ ಹೈಕಮಾಂಡ್ ಮಂಗಳೂರು ಕ್ಷೇತ್ರಕ್ಕೂ ಮಾಜಿ ಸಚಿವ ಹಾಲಿ ಶಾಸಕ ಯು ಟಿ ಖಾದರ್ ಅವರ ಹೆಸರೇ ಅಂತಿಮಗೊಂಡಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಕಸರತ್ತು ಕೆಲವೇ ದಿನಗಳಲ್ಲಿ ಎಲ್ಲವೂ ಸುಸೂತ್ರವಾಗಿ ಮುಗಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಪ್ರಕ್ರಿಯೆ ಮುಂದುವರಿಸಿದ್ದಾರೆ.
0 comments:
Post a Comment