ಬಂಟ್ವಾಳ, ಮಾರ್ಚ್ 20, 2023 (ಕರಾವಳಿ ಟೈಮ್ಸ್) : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಾವೇಶ ಬಿ.ಸಿ.ರೋಡಿನಲ್ಲಿ ಭಾನುವಾರ (ಮಾ 19) ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಎ.ಐ.ಸಿ.ಸಿ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ. ಅಪ್ಪಣ್ಣ, ಎ.ಐ.ಸಿ.ಸಿ.ಟಿ.ಯು ಸಂಘಟನೆ ಒಂದು ಕೇಂದ್ರ ಕಾರ್ಮಿಕ ಸಂಘಟನೆಯಾಗಿದ್ದು ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಹಲವು ಚಳುವಳಿಗಳನ್ನು ನಡೆಸುವುದರ ಮೂಲಕ ಕಾರ್ಮಿಕರಿಗೆ ನ್ಯಾಯ ದೊರಕಿಸಲು ಸಾದ್ಯವಾಗಿದೆ. ಕೊರೋನಾ ಸಂದರ್ಭದಲ್ಲೂ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸಿದ ಏಕೈಕ ಕಾರ್ಮಿಕ ಸಂಘಟನೆ ಎ.ಐ.ಸಿ.ಸಿ.ಟಿ.ಯು ಆಗಿದೆ ಎಂದರು.
ರಾಜ್ಯ ಸರಕಾರವು ಅಕ್ಷರ ದಾಸೋಹ, ಆಶಾ, ಅಂಗನವಾಡಿ ಮುಂತಾದ ನೌಕರರನ್ನು ಇನ್ನೂ ನೌಕರರೆಂದು ಪರಿಗಣಿಸದೆ ಸಮಾಜ ಸೇವಕರು ಎಂದು ಬಿಂಬಿಸಿ ಸೌಲಭ್ಯದಿಂದ ವಂಚಿಸುತ್ತಿದೆ. ಕಾರ್ಮಿಕ ವರ್ಗ ಇವತ್ತು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರು ಕೇವಲ ತಮ್ಮ ಬೇಡಿಕೆಗಳ ಈಡೇರಿಕೆ ಮಾತ್ರ ಹೋರಾಟಗಳನ್ನು ನಡೆಸಲು ಸೀಮಿತರಾಗಬಾರದು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ ಸರಕಾರವನ್ನು ಕಿತ್ತೊಗೆಯಲು ಕಾರ್ಮಿಕ ವರ್ಗ ಪಣತೊಡಬೇಕೆಂದು ಇದೇ ವೇಳೆ ಅಪ್ಪಣ್ಣ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿ.ಪಿ.ಐ.ಎಂ.ಎಲ್ (ಲಿಬರೇಶನ್) ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಪಿ.ಆರ್.ಎಸ್ ಮಣಿ, ಕಾರ್ಮಿಕ ಮುಖಂಡರಾದ ಕಾಮ್ರೇಡ್ ರಾಮಣ್ಣ ವಿಟ್ಲ, ಸಿ.ಪಿ.ಐ.ಎಂ.ಎಲ್ (ಲಿಬರೇಷನ್) ಜಿಲ್ಲಾ ಮುಖಂಡ ಭರತ್ ಕುಮಾರ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡ ಜಯಶ್ರೀ ಆರ್ ಕೆ ಮೊದಲಾದವರು ಭಾಗವಹಿಸಿದ್ದರು.
ಎ.ಐ.ಸಿ.ಸಿ.ಟಿ.ಯು ಮುಖಂಡ ಮೋಹನ್ ಕೆ ಇ ಸ್ವಾಗತಿಸಿ ಪ್ರಸ್ತಾವನೆಗೈದರು. ಯುವ ರೈತ ಸಂಘದ ಗೌರವಾದ್ಯಕ್ಷ ಸುರೇಂದ್ರ ಕೋರ್ಯ, ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಮುಖಂಡ ಸತೀಶ್ ಕುಮಾರ್, ಆದಿವಾಸಿ ಸಂರಕ್ಷಣಾ ಸಮಿತಿ ಕೊಡಗು ಜಿಲ್ಲಾ ಮುಖಂಡ ರವಿ, ಕಾರ್ಮಿಕ ಮುಖಂಡರಾದ ಆನಂದ ಶೆಟ್ಟಿಗಾರ್, ಸುರೇಂದ್ರ ಕೋಟ್ಯಾನ್, ಸರಸ್ವತಿ ಮಾಣಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡ ವಾಣಿಶ್ರೀ ಕನ್ಯಾನ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ನೂತನ ಜಿಲ್ಲಾ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ರಾಮಣ್ಣ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕೆ ಇ, ಉಪಾದ್ಯಕ್ಷರುಗಳಾಗಿ ರಾಜಾ ಚೆಂಡ್ತಿಮಾರ್, ಇಬ್ರಾಹಿಂ ಮೈಂದಾಳ, ಸುರೇಂದ್ರ ಕೋಟ್ಯಾನ್,
ಕಾರ್ಯದರ್ಶಿಗಳಾಗಿ ಸತೀಶ್ ಕುಮಾರ್ ಮಂಗಳೂರು, ಭರತ್ ಕುಮಾರ್ ಮಂಗಳೂರು, ನಾಗೇಶ್ ಕೈರಂಗಳ, ಕೋಶಧಿಕಾರಿಯಾಗಿ ಸರಸ್ವತಿ ಮಾಣಿ ಸಹಿತ 13 ಮಂದಿಯ ಕಾರ್ಯಕಾರಿ ಸಮಿತಿ ರಚಿಸಲಾಯಿತು.
0 comments:
Post a Comment