ಕೋಮು ಸೂಕ್ಷ್ಮ ಬಂಟ್ವಾಳದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಯಿತು ನವೀಕರಣಗೊಂಡ ಮೂಲರಪಟ್ಣ ಮುಹಿಯುದ್ದೀನ್ ಜುಮಾ ಮಸೀದಿ - Karavali Times ಕೋಮು ಸೂಕ್ಷ್ಮ ಬಂಟ್ವಾಳದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಯಿತು ನವೀಕರಣಗೊಂಡ ಮೂಲರಪಟ್ಣ ಮುಹಿಯುದ್ದೀನ್ ಜುಮಾ ಮಸೀದಿ - Karavali Times

728x90

24 March 2023

ಕೋಮು ಸೂಕ್ಷ್ಮ ಬಂಟ್ವಾಳದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಯಿತು ನವೀಕರಣಗೊಂಡ ಮೂಲರಪಟ್ಣ ಮುಹಿಯುದ್ದೀನ್ ಜುಮಾ ಮಸೀದಿ

ಬಂಟ್ವಾಳ, ಮಾರ್ಚ್ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಮೂಲರಪಟ್ಣದಲ್ಲಿ ಇತ್ತೀಚೆಗೆ ನವೀಕರಣಗೊಂಡು ಲೋರ್ಕಾಣೆಗೊಂಡ ಮುಹಿಯುದ್ದೀನ್ ಜುಮಾ ಮಸೀದಿ ಇದೀಗ ಜಿಲ್ಲೆಯ ಸಾಮರಸ್ಯಕ್ಕೆ ಸಾಕ್ಷಿಯಾಗಿ ಸುದ್ದಿ ಮಾಡಿದೆ. 

ಕೋಮು ಸೂಕ್ಷ್ಮ ಪ್ರದೇಶ, ರಾಜಕೀಯ ಸೂಕ್ಷ್ಮ ಪ್ರದೇಶ ಎಂದೆಲ್ಲಾ ಹಣೆ ಪಟ್ಟಿ ಕಟ್ಟಿಕೊಂಡಿರುವ, ಒಂದಿಲ್ಲ ಒಂದು ರೀತಿಯ ಸಣ್ಣಪುಟ್ಟ ಕ್ಷುಲ್ಲಕ ವಿಚಾರಗಳಿಗೆ ಬಿಸಿಯೇರುವ ಬಂಟ್ವಾಳ ತಾಲೂಕಿನಲ್ಲಿ ನವೀಕರಣಗೊಂಡ ಮೂಲರಪಟ್ಣ ಮುಹಿಯುದ್ದೀನ್ ಜುಮಾ ಮಸೀದಿ ಹಿಂದೂ ಬಾಂಧವರು ಮರ ಒದಗಿಸಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. 800 ವರ್ಷದ ಪುರಾತನ ಈ ಮಸೀದಿ ಇದೀಗ ಸಾಮರಸ್ಯದ ದ್ಯೋತಕವಾಗಿ, ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿ ಸುದ್ದಿ ಮಾಡಿದೆ.

ಊರಿನ ಹಾಗೂ ಪರವೂರಿನ ದಾನಿಗಳ ಸಹಾಯದಿಂದ ಪುರಾತನ ಮಸೀದಿ ಆಧುನಿಕ ರೀತಿಯಲ್ಲಿ ಕಂಗೊಳಿಸಿದರೆ, ಇದರ ಒಳಗಿನ ಕೆತ್ತನೆಗೆ ಪೂರಕವಾದ ಮರ-ಮಟ್ಟುಗಳನ್ನು ಹಿಂದೂ ಬಾಂಧವರು ನೀಡಿದ್ದು, ಹಿಂದೂ ಧರ್ಮಕ್ಕೆ ಸೇರಿದ ಬಡಗಿ ವೃತ್ತಿಯ ರತ್ನಾಕರ ಅವರು ಮಸೀದಿಯ ಒಳಗಿನ ಕೆತ್ತನೆಗಳನ್ನು ಮಾಡಿಕೊಟ್ಟು ಒಂದು ರೀತಿಯ ಸೌಹಾರ್ದಕ್ಕೆ ಈ ಮಸೀದಿ ಸಾಕ್ಷಿಯಾಗಿದೆ. 

ಮರದ ಕೆತ್ತನೆಯಲ್ಲಿ ಹೆಸರುವಾಸಿಯಾಗಿರುವ ರತ್ನಾಕರ್ ಅವರು ಇದೇ ಮೊದಲ ಬಾರಿಗೆ ಮಸೀದಿಯ ಕೆತ್ತನೆ ಕೆಲಸ ಮಾಡಿದ್ದಾರೆ. ರತ್ನಾಕರ ಅವರ ಕೈ ಚಳಕದಿಂದ ಮಸೀದಿಯ ಒಳಭಾಗ ಅತ್ಯಂತ ಸುಂದರ ಹಾಗೂ ಆಕರ್ಷಕವಾಗಿ ಮೂಡಿಬಂದಿದೆ. ಈ ಮಸೀದಿಯ ಸೌಂದರ್ಯವನ್ನು ಜನ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಸಕತ್ ವೈರಲ್ ಆಗಿದೆ. ರತ್ನಾಕರ್ ಅವರ ಕೈ ಚಳಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಸುಂದರ ಕೆಲಸವನ್ನು ಗೌರವಿಸಿದ ಮಸೀದಿ ಆಡಳಿತ ಸಮಿತಿಯು ಅವರಿಗೆ ಐಫೆÇೀನ್ ಹಾಗೂ ವಾಚ್ ಗಿಫ್ಟ್ ರೂಪದಲ್ಲಿ ನೀಡಿ ಕೃತಜ್ಞತೆ ಸಲ್ಲಿಸಿದೆ.

ಮಸೀದಿ ಉದ್ಘಾಟನೆ ಸಂದರ್ಭ ನೋಡ ಬನ್ನಿ ನಮ್ಮೂರ ಮಸೀದಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಸೀದಿಯ ಸುಂದರ ಕೆತ್ತನೆ ನೋಡಲು ಹಿಂದೂ, ಮುಸ್ಲಿ, ಕ್ರ್ರೈಸ್ತರೆನ್ನದೇ ಜನ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡಿದ್ದರು.

ಒಟ್ಟಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸೌಹಾರ್ದತೆಗೆ ಸವಾಲಾಗುತ್ತಿದ್ದ ಬಂಟ್ವಾಳದಲ್ಲಿ ಇಂತಹ ಸಾಮರಸ್ಯಕರ ಘಟನೆಗಳು ವಿಕೃತ ಮನಸ್ಸಿನ ಮಂದಿಗಳ ಪ್ರಯತ್ನಕ್ಕೆ ಸೋಲಾಗಿಸಿ ಜಿಲ್ಲೆಯ ಸೌಹಾರ್ದ ಪರಂಪರೆಗೆ ನೀರೆರೆದು ಪೋಷಿಸಲಿ ಎಂದು ಜಿಲ್ಲೆಯ ಜನ ಹಾರೈಸಿದ್ದಾರೆ. ಬಂಟ್ವಾಳದ ಈ ಸೌಹಾರ್ದತೆ ಸದ್ಯದ ಸನ್ನಿವೇಶದಲ್ಲಿ ಇಡೀ ಜಿಲ್ಲೆಗೆ ಪಸರಿಸಿ ಜನ ಮನಸ್ಸುಗಳನ್ನು ಪೋಣಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋಮು ಸೂಕ್ಷ್ಮ ಬಂಟ್ವಾಳದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಯಿತು ನವೀಕರಣಗೊಂಡ ಮೂಲರಪಟ್ಣ ಮುಹಿಯುದ್ದೀನ್ ಜುಮಾ ಮಸೀದಿ Rating: 5 Reviewed By: karavali Times
Scroll to Top