ಮಂಗಳೂರು, ಮಾರ್ಚ್ 29, 2023 (ಕರಾವಳಿ ಟೈಮ್ಸ್) : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಂಡಿದೆ. ಆಡಳಿತರೂಢ ಬಿಜೆಪಿ ಮಾತ್ರ ಕಾದುನೋಡುವ ತಂತ್ರ ಅನುಸರಿಸಿದ್ದು, ಚುನಾವಣೆ ದಿನಾಂಕ ಘೋಷಣೆಯ ಬೆನ್ನಿಗೆ ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಕೊಂಡು ಜಿಲ್ಲೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದೆ. ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರಕ್ಕೆ ಹಳೆ ಹುಲಿಗಳು ಹಾಗೂ ಪ್ರಭಾವಿ ರಾಜಕಾರಣಿಗಳನ್ನೇ ನೆಚ್ಚಿಕೊಂಡ ಕಾಂಗ್ರೆಸ್ ನಾಯಕರು ಮೂಡಬಿದ್ರೆ ಕ್ಷೇತ್ರಕ್ಕೆ ಯುವ ನಾಯಕ ಮಿಥುನ್ ರೈ ಅವರ ಹೆಸರು ಸೂಚಿಸಿದರೆ, ಬೆಳ್ತಂಗಡಿ ಹಾಗೂ ಸುಳ್ಯಕ್ಕೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಮೂಲಕ ಐದೂ ಕ್ಷೇತ್ರಗಳಲ್ಲಿ ಚುನಾವಣಾ ಬಿರುಸು ಭರದಿಂದ ಸಾಗಿದೆ.
ಇನ್ನು ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟಿಗಾಗಿ ಭಾರೀ ಪೈಪೋಟಿ ಇದೆ ಎನ್ನಲಾಗಿದ್ದು, ಮಾಜಿ ಶಾಸಕ ಹಾಗೂ ಉದ್ಯಮಿಯೋರ್ವರ ನಡುವೆ ಈ ಬಿರುಸಿನ ಸ್ಪರ್ಧೆ ಇದೆ ಎಂದು ಹೇಳಲಾಗಿದೆ. ಆದರೆ ಮಾಜಿ ಶಾಸಕರ ಮೇಲೆ ಎಐಸಿಸಿ ಅಧ್ಯಕ್ಷರ ಸಹಿತ ರಾಜ್ಯ ನಾಯಕರು ಕೂಡಾ ಬಂಟ್ವಾಳ ಮಾದರಿಯ ನೀತಿ ಅನುಸರಿಸುವ ಒಲವು ತೋರಿರುವುದು ಸ್ಪಷ್ಟವಾಗಿದ್ದು ಇದು ಮೊಯಿದಿನ್ ಬಾವಾ ಅವರ ಕ್ಷೇತ್ರ ಸಂಚಲನಕ್ಕೆ ಮೇಳುಗೈ ದೊರೆತಂತಾಗಿದೆ ಎನ್ನಲಾಗುತ್ತಿದೆ. ಇಲ್ಲಿ ಬಾವಾ ಪರ ಈಗಾಗಲೇ ಪಕ್ಷದ ಕ್ಷೇತ್ರ ವ್ಯಾಪ್ತಿಯ ಮುಂಚೂಣಿ ಘಟಕದ ನಾಯಕರುಗಳು ದೆಹಲಿ ಪರೇಡ್ ನಡೆಸಿ ನಾಯಕರಿಗೆ ಬಿಸಿ ಮುಟ್ಟಿಸಿದ್ದು, ಇತ್ತ ಕ್ಷೇತ್ರದಲ್ಲಿ ಘಟಕಗಳ ಪದಾಧಿಕಾರಿಗಳು ಹಾಗೂ ಕೈ ಕಾರ್ಯಕರ್ತರು ಕೂಡಾ ಪಕ್ಷದ ನಾಯಕರೇನಾದರೂ ಝಣ ಝಣ ಕಾಂಚಾನ್ಕಕೇನಾದರೂ ಕಟ್ಟು ಬಿದ್ದದ್ದೇ ಆದಲ್ಲಿ ಸಾಮೂಹಿಕ ರಾಜೀನಾಮೆ ನೀಡಿ ನಾಯಕರ ವಿರುದ್ದ ಬಹಿರಂಗ ಸಮರ ಸಾರುವ ಸಂದೇಶವನ್ನು ಈಗಾಗಲೇ ಪಕ್ಷದ ದೆಹಲಿ ಹಾಗೂ ಬೆಂಗಳೂರು ಹೈಕಮಾಂಡಿಗೂ ರವಾನಿಸಿದ್ದಾರೆ ಎಂದು ಕ್ಷೇತ್ರದ ಜನ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಜನಬೆಂಬಲ ಹಾಗೂ ಪಕ್ಷ ನಿಷ್ಠೆಗೆ ತಲೆಬಾಗಿದ್ದಾರೆ ಎನ್ನಲಾಗಿದ್ದು, ಮೊಯಿದಿನ್ ಬಾವಾ ಅವರಿಗೆ ಈ ಬಾರಿ ಕೂಡಾ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಿದ್ದಾರೆ ಎನ್ನಲಾಗಿದೆ.
ಇದೇ ನೀತಿಯನ್ನು ಮಂಗಳೂರು ದಕ್ಷಿಣದಲ್ಲೂ ಅನುರಿಸಿರುವ ನಾಯಕರು ಇಲ್ಲೂ ಮಾಜಿ ಶಾಸಕರಿಗೆ ಸ್ಪರ್ಧೆಗೆ ಮತ್ತೊಂದು ಅವಕಾಶ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನುಳಿದಿರುವ ಪುತ್ತೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖ ಅಂದರೆ ಇತ್ತೀಚೆಗಷ್ಟೆ ಪಕ್ಷದ ಧ್ವಜ ಹಿಡಿದ ಉದ್ಯಮಿ, ಧಾರ್ಮಿಕ, ಸಾಮಾಜಿಕ ಮುಖಂಡ ಅಶೋರ್ ರೈ ಅವರನ್ನು ನೆಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಪಕ್ಷದ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಒಟ್ಟಾರೆ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಪಕ್ಷದ 2ನೇ ಪಟ್ಟಿ ಬಿಡುಗಡೆಯಾಗಲಿದ್ದು, ಅದೇ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳ ಹೆಸರುಗಳು ಕೂಡಾ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
0 comments:
Post a Comment