ಬೆಂಗಳೂರು, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರು ಹಠಾತ್ ಹೃದಯಾಘಾತಕ್ಕೊಳಗಾಗಿ ಶನಿವಾರ (ಮಾ 11) ಬೆಳಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸರಳ-ಸಜ್ಜನಿಕೆಯ, ಅಭಿವೃದ್ದಿಪರ ರಾಜಕಾರಣಿಯಾಗಿದ್ದ ಮೃತ ಧ್ರುವನಾರಾಯಣ ಅವರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೈಸೂರಿನಲ್ಲಿದ್ದ ಧ್ರುವನಾರಾಯಣ ಅವರಿಗೆ ಮುಂಜಾನೆ ಸುಮಾರು 6:30ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥತೆಯಿಂದಾಗಿ ಆಸ್ಪತ್ರೆಗೆ ಆಗಮಿಸಿದ ಧ್ರುವನಾರಾಯಣ್ ಅವರನ್ನು ವೈದ್ಯರ ತಂಡ ಚಿಕಿತ್ಸೆಗೊಳಪಡಿಸಿದೆ. ಆಸ್ಪತ್ರೆಗೆ ಆಗಮಿಸಿದ್ದಾಗಲೇ ಅವರು ಕೋಮಾ ಸ್ಥಿತಿಗೆ ಹೋಗಿದ್ದರು. ತೀವ್ರ ರಕ್ತವಾಂತಿಯಾಗಿ ಅತಿಯಾದ ರಕ್ತಸ್ರಾವ ಉಂಟಾಗಿದ್ದರಿಂದ ಅವರು ತೀವ್ರವಾಗಿ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಧ್ರುವನಾರಾಯಣ ಅವರ ನಿಧನದಿಂದಾಗಿ ಹುಟ್ಟೂರು ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಹೆಗ್ಗವಾಡಿಯಲ್ಲಿ ರಂಗಸ್ವಾಮಿ ತಾಯಮ್ಮ ದಂಪತಿಯ ಪುತ್ರನಾಗಿ 1961ರಲ್ಲಿ ಜನಿಸಿದ್ದ ಧ್ರುವನಾರಾಯಣ ರಾಜಕೀಯವಾಗಿ ಎಷ್ಟೆ ಎತ್ತರಕ್ಕೆ ಬೆಳೆದರೂ ಹುಟ್ಟೂರನ್ನು ಮರೆತಿರಲಿಲ್ಲ. ತಮ್ಮೂರನ್ನು ಸಾಕಷ್ಟು ಅಭಿವೃದ್ದಿಪಡಿಸಿದ್ದರು. ಗ್ರಾಮದ ಬೀದಿ ಬೀದಿಗಳಿಗೆ ಸಿಮೆಂಟ್ ರಸ್ತೆಗಳು, ಕಬಿನಿನದಿಯಿಂದ ಶಾಶ್ವತ ಕುಡಿಯುವ ಬೀರು ಸರಬರಾಜು, 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಅಂಬೇಡ್ಕರ ಭವನ, ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಉತ್ತಮ ಡಾಂಬರು ರಸ್ತೆ ವ್ಯವಸ್ಥೆ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದ ಧ್ರುವನಾರಾಯಣ ಅವರು ಅಭಿವೃದ್ದಿಪರ ಚಿಂತನೆಯ ರಾಜಕಾರಣಿಯಾಗಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಸಹಿತ ವಿವಿಧ ಪಕ್ಷದ ನಾಯಕರು ದಿಗ್ಭ್ರಮೆ ಹಾಗೂ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
0 comments:
Post a Comment