ಬಂಟ್ವಾಳ ಪುರಸಭೆಯ ಜೆಡಿಎಸ್ ಅಭ್ಯರ್ಥಿ “ಕೈ” ಪಾಳಯಕ್ಕೆ : ಎಂ.ಎಲ್.ಎ. ಅಭ್ಯರ್ಥಿ ಚಿತ್ತವೂ ಕಾಂಗ್ರೆಸ್ಸಿನತ್ತ - Karavali Times ಬಂಟ್ವಾಳ ಪುರಸಭೆಯ ಜೆಡಿಎಸ್ ಅಭ್ಯರ್ಥಿ “ಕೈ” ಪಾಳಯಕ್ಕೆ : ಎಂ.ಎಲ್.ಎ. ಅಭ್ಯರ್ಥಿ ಚಿತ್ತವೂ ಕಾಂಗ್ರೆಸ್ಸಿನತ್ತ - Karavali Times

728x90

18 March 2023

ಬಂಟ್ವಾಳ ಪುರಸಭೆಯ ಜೆಡಿಎಸ್ ಅಭ್ಯರ್ಥಿ “ಕೈ” ಪಾಳಯಕ್ಕೆ : ಎಂ.ಎಲ್.ಎ. ಅಭ್ಯರ್ಥಿ ಚಿತ್ತವೂ ಕಾಂಗ್ರೆಸ್ಸಿನತ್ತ

 ಜಿ ಎ ಅಮಾನುಲ್ಲಾ 
ಇಬ್ರಾಹಿಂ ಕೈಲಾರ್

ಬಂಟ್ವಾಳ, ಮಾರ್ಚ್ 18, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಯುವ ಘಟಕದ ಸಕ್ರಿಯ ನಾಯಕತ್ವ ವಹಿಸಿಕೊಂಡಿದ್ದ ಜಿ ಎ ಅಮಾನುಲ್ಲಾ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಕಳೆದ ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಬ್ರಾಹಿಂ ಕೈಲಾರ್ ಅವರೂ ಕೂಡಾ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಕಳೆದ ಬಾರಿ ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 24 ರಲ್ಲಿ ಹಾಲಿ ಕಾಂಗ್ರೆಸ್ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ವಿರುದ್ದ ಜೋರಾಗಿ ತೊಡೆತಟ್ಟಿ ವಾರ್ಡಿನಲ್ಲಿ ಸಂಚಲನ ಸೃಷ್ಟಿಸಿ ಜೆಡಿಎಸ್ ಪಕ್ಷದ ಬಿ ಫಾರಂನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಜಿ ಎ ಅಮಾನುಲ್ಲಾ ಅವರು ಇದೀಗ ಅದೇ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರ ನೇತೃತ್ವದಲ್ಲಿ ಮಾಜಿ ಸಚಿವ ಬಿ ರಮನಾಥ ರೈ ಅವರ ಸಮ್ಮುಖದಲ್ಲಿ ಜೆಡಿಎಸ್ ತೊರೆದು “ಕೈ” ಹಿಡಿದಿದ್ದಾರೆ. 

ಬಂಟ್ವಾಳದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು ಕೈಗೊಂಡಿರುವ ಅತ್ಯಮೋಘ ಅಭಿವೃದ್ದಿ ಕಾರ್ಯಗಳು ಹಾಗೂ ಕಳೆದ ಬಾರಿಯ ಸೋಲಿನ ಬಳಿಕವೂ ರಾಜಕಾರಣ ಕೇವಲ ಮತಗಳಿಕೆಗಾಗಿ ಮಾತ್ರವಲ್ಲ, ಸದಾ ಜನಸೇವೆಯೇ ಉಸಿರು ಎಂದುಕೊಂಡು ಅಧಿಕಾರ ಇಲ್ಲದಿದ್ದರೂ ಕಳೆದ ಐದು ವರ್ಷಗಳಿಂದ ನಿರಂತರ ಪಾದರಸ ಚಲನೆಯ ಮೂಲಕ ಸಂಚಲನ ಸೃಷ್ಟಿರುವುದರ ಬಗ್ಗೆ ಸ್ವತಃ ಅಭಿಮಾನಗೊಂಡು ಹಾಗೂ ರಾಜ್ಯದಲ್ಲಿ ಸರಕಾರ ಇಲ್ಲದಿದ್ದರೂ, ಸ್ಥಳೀಯವಾಗಿ ಶಾಸಕರ ಬಲವೂ ಇಲ್ಲದಿದ್ದರೂ ಬಂಟ್ವಾಳ ಪುರಸಭೆಯ ವಾರ್ಡ್ 24 ರ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ಜನಸ್ನೇಹಿ ರಾಜಕಾರಣವನ್ನು ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅಮಾನುಲ್ಲಾ ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರ ಬಡ ಹಾಗೂ ಸಾಮಾನ್ಯ ಜನರಿಗಾಗಿ ಕೈಗೊಂಡ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಈ ಬಾರಿ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೈಗೊಂಡ ಗ್ಯಾರಂಟಿ ಭರವಸೆ ಯೋಜನೆಗಳೂ ಕೂಡಾ ನನ್ನನ್ನು ಕಾಂಗ್ರೆಸ್ ಪಕ್ಷದ ಬಳಿಗೆ ಕೊಂಡೊಯ್ದಿದೆ ಎಂದಿದ್ದಾರೆ. 

ಈ ಮಧ್ಯೆ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಇಬ್ರಾಹಿಂ ಕೈಲಾರ್ ಅವರು ಕೂಡಾ ಕಾಂಗ್ರೆಸ್ ಬಾಗಿಲವರೆಗೆ ಬಂದು ನಿಂತಿದ್ದು, ಸೂಕ್ತ ಸಮಯ-ಸಂದರ್ಭದಲ್ಲಿ ಮಾಜಿ ಸಚಿವರ ನೇತೃತ್ವದಲ್ಲಿ ಕೈಪಾಳಯ ಸೇರಿಕೊಳ್ಳಲಿದ್ದಾರೆ ಎಂಬ ಮಹತ್ವದ ಬೆಳವಣಿಗೆ ಬಂಟ್ವಾಳದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಜೆಡಿಎಸ್ ಪಕ್ಷದ ಬಂಟ್ವಾಳದ ಪ್ರಮುಖ ನಾಯಕರುಗಳಾದ ಪಿ ಎ ರಹೀಂ, ಮುಹಮ್ಮದ್ ಶಫಿ, ಬಿ ಮೋಹನ್ ಮೊದಲಾದವರು ಜೆಡಿಎಸ್ ತೊರೆದು ಮಾಜಿ ಸಚಿವರ ಪಾಳಯ ಸೇರಿಕೊಂಡಿರುವುದನ್ನು ಈ ಸಂದರ್ಭ ಉಲ್ಲೇಖಿಸಬಹುದು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭೆಯ ಜೆಡಿಎಸ್ ಅಭ್ಯರ್ಥಿ “ಕೈ” ಪಾಳಯಕ್ಕೆ : ಎಂ.ಎಲ್.ಎ. ಅಭ್ಯರ್ಥಿ ಚಿತ್ತವೂ ಕಾಂಗ್ರೆಸ್ಸಿನತ್ತ Rating: 5 Reviewed By: karavali Times
Scroll to Top