ಬಂಟ್ವಾಳ, ಮಾರ್ಚ್ 20, 2023 (ಕರಾವಳಿ ಟೈಮ್ಸ್) : ಅಮ್ಟಾಡಿ ಗ್ರಾಮದ ಕಜಿಪಿತ್ಲಿನಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಈ ಪ್ರದೇಶದಲ್ಲಿ ಗ್ರಾಮ ಪಂಚಾಯತಿನಿಂದ ಯಾವುದೇ ನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗಿಲ್ಲ. ಗ್ರಾಮದ ಪ್ರತೀ ಮನೆ ಮನೆಗೆ ನೀಡಬೇಕಾದ ನೀರಿನ ಯೋಜನೆ ಕೇಂದ್ರ ಸರಕಾರದ ಜನಜೀವನ್ ಮಿಷನ್ ಆಶಯದಂತೆ ಹರ್ ಘರ್ ಜಲ್ ಯೋಜನೆಯ ಸಂಪರ್ಕವೂ ಊರಿನ ಜನತೆಗೆ ಆಗಿಲ್ಲ. ಕಳೆದ ಹಲವಾರು ವರ್ಷಗಳಿಂದ ತಡ್ಯಾಲ್ ಬಳಿಯ ಒಂದು ಮನೆಯ ಬಾವಿಯನ್ನೇ ನಂಬಿದ್ದರು. ಆದರೆ ಆ ಬಾವಿಯ ನೀರು ಕೂಡಾ ಈ ಉರಿ ಬಿಸಿಲಿಗೆ ಬತ್ತಿ ಹೋಗಿದೆ. ಇದರಿಂದ ಆ ಊರಿನ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ದಕ್ಷಿಣ ಕನ್ನಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ಅಮ್ಟಾಡಿ ಗ್ರಾಮ ಮತ್ತು ಕೂರಿಯಾಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಆಶಯದಂತೆ ಎಲ್ಲಾ ಮನೆಗಳಿಗೂ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದು, ಡಿಸೆಂಬರ್ 29 ರಂದು ಹರ್‍ಘರ್ ಜಲ್ ಗ್ರಾಮವಾಗಿ ಘೋಷಣೆಯನ್ನೂ ಮಾಡಿತ್ತು. ಆದರೆ ಗ್ರಾಮದಲ್ಲಿ ಯಾವ ಕಡೆಯೆಲ್ಲಾ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾರೆಂಬ ಸರ್ವೆಯನ್ನೂ ಇದುವರೆಗೂ ಮಾಡಿಲ್ಲ ಎನ್ನುತ್ತಾರೆ ಗ್ರಾಮದ ಜನ.
ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ಸಾರ್ವಜನಿಕರು ತಂದರೂ ಸ್ಪಂದನೆ ಮಾತ್ರ ಶೂನ್ಯ. ಪಂಚಾಯತ್ ಜನ ಪ್ರತಿನಿಧಿಗಳಿಗೂ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದರೆ ಪಂಚಾಯತ್‍ನಲ್ಲಿ ನೀರು ಸಂಪರ್ಕಕ್ಕೆ ದೊಡ್ಡ ಮಟ್ಟದ ಅನುದಾನ ಇಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment