ಸಿಡಿ, ಇಡಿ, ಬೇಡಿ ಮೂಲಕ ಉಸಿರಾಡುತ್ತಿರುವ ಬಿಜೆಪಿ ಸರಕಾರ, ರಾಹುಲ್ ಗಾಂಧಿಗೆ ಅನುರಿಸಿದ ನೀತಿ ಪ್ರಾಮಾಣಿಕವಾಗಿ ಅನುಸರಿಸಿದರೆ ಬಿಜೆಪಿ ನಾಯಕರೆಲ್ಲ ಅನರ್ಹರು : ಎಂ ಜಿ ಹೆಗ್ಡೆ ವಾಗ್ದಾಳಿ
ಬಂಟ್ವಾಳ, ಮಾರ್ಚ್ 25, 2023 (ಕರಾವಳಿ ಟೈಮ್ಸ್) : ಆಧಾರ್ ನಿರಾಧಾರ್ ಎಂದವರು ಇದೀಗ ಆಧಾರ್ ಲಿಂಕ್ ಹೆಸರಿನಲ್ಲೂ ಸಾವಿರಾರು ರೂಪಾಯಿ ದಂಡ ವಿಧಿಸಿ ಜನರನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕಿಡಿ ಕಾರಿದರು.
ತನ್ನ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 14ನೇ ದಿನ ಶುಕ್ರವಾರ (ಮಾ 24) ರಾಯಿ ಜಂಕ್ಷನ್ನಿನಲ್ಲಿ ನಡೆದ ಸಮಾರೋಪ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಸೌಲಭ್ಯಗಳು ಸುಲಭ ಹಾಗೂ ಸುಲಲಿತವಾಗಿ ಜನರಿಗೆ ತಲುಪಿಸುವ ಹಾಗೂ ಸೋರಿಕೆ ನಿಯಂತ್ರಿಸುವ ಮಹತ್ವದ ಉದ್ದೇಶದಿಂದ ಕಳೆದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಅಂದು ಆಧಾರ್ ಕಡ್ಡಾಯಗೊಳಿಸುವ ಸಂದರ್ಭ ಆಧಾರ್-ನಿರಾಧಾರ್ ಎಂದೆಲ್ಲಾ ಬೊಬ್ಬಿಟ್ಟು ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದ ಬಿಜೆಪಿಗರು ಇಂದು ಅದೇ ಆಧಾರ್ ಜೋಡಣೆ ನೆಪದಲ್ಲಿ ಬಡ ಸಾಮಾನ್ಯ ಜನರನ್ನು ಲೂಟಿ ಮಾಡುತ್ತಿದ್ದಾರೆ. ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳ ಜೇಬು ತುಂಬಿಸಲು ಬಡವರ ಕಿಸೆಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಕಾಂಗ್ರೆಸ್ ಸರಕಾರಗಳು ಜನರಿಗೆ ಬೇಕಾದುದನ್ನು ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಮಾಡಿಟ್ಟಿದೆ. ಇನ್ನು ಬಿಜೆಪಿಗರಿಗೆ ಅಭಿವೃದ್ದಿ ಮಾಡುವ ಯೋಗ್ಯತೆ ಇಲ್ಲದಿದ್ದರೂ ಪರವಾಗಿಲ್ಲ. ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟದ್ದನ್ನು ಮಾರುವುದನ್ನು ನಿಲ್ಲಿಸಲಿ ಎಂದು ವ್ಯಂಗ್ಯವಾಡಿದ ರಮಾನಾಥ ರೈ ಈ ಬಿಜೆಪಿಗರನ್ನು ಇನ್ನೂ ಕೂಡಾ ಜನ ನಂಬಿದರೆ ಕಸಾಯಿಯನ್ನು ಕುರಿ ನಂಬಿದಂತೆ ಎಂದು ಚಟಾಕಿ ಹಾರಿಸಿದರು.
ಹೇಳಿದ್ದನ್ನು ಒಂದನ್ನೂ ಮಾಡುವ ಯೋಗ್ಯತೆ ಇಲ್ಲದ ಬಿಜೆಪಿಗರು ಇನ್ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗಿತ್ತಾರೆ ಎಂದು ಪ್ರಶ್ನಿಸಿದ ರೈ ಅದಕ್ಕಾಗಿ ಭಾವನಾತ್ಮಕ ಹಾಗೂ ಮತೀಯ ವಿಷಯಗಳ ಮೂಲಕ ಜನರನ್ನು ಡೈವರ್ಟ್ ಮಾಡುವ ಕೆಲಸ ಮಾಡುತ್ತಿದ್ದಾರಷ್ಟೆ. ಆದರೆ ಇದ್ಯಾವುದೂ ಇನ್ನು ಮುಂದಕ್ಕೆ ನಡೆಯುವುದಿಲ್ಲ. ತಾಲೂಕು ಕಛೇರಿಗಳಲ್ಲೂ ಕಡತಗಳು ಮಾಯವಾಗಲು ಆರಂಭ ಆಗಿದೆ ಎಂಬುದು ಬಂಟ್ವಾಳದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ವೇಳೆ ಬಯಲಾಗಿದೆ. ಈ ಸರಕಾರದಲ್ಲಿ ಎಲ್ಲವೂ ಮಂಗ ಮಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳದಲ್ಲಿ ಬಿಜೆಪಿಗರ ಅಭಿವೃದ್ದಿ ಏನೆಂಬುದು ತಿಳಿಯಲು ಗ್ರಾಮಾಂತರ ಪ್ರದೇಶ ಬಿಡಿ, ಬಿ ಸಿ ರೋಡು ಸಿಟಿಯ ಮಧ್ಯಭಾಗದಲ್ಲಿ ನಿಂತು ಒಮ್ಮೆ ಕಣ್ಣು ತಿರುಗಿಸಿದರೆ ಗೊತ್ತಾಗುತ್ತದೆ. ನನ್ನ ಅವಧಿಯಲ್ಲಿ ಆಗಿದ್ದು ಬಿಟ್ಟರೆ ಬೇರೆ ಯಾವುದಾದರೂ ಸರಕಾರಿ ಬಿಲ್ಡಿಂಗ್ ಆಗಿದ್ಯಾ ಎಂಬುದು ಮನವರಿಕೆಯಾಗುತ್ತದೆ. ಬಂಟ್ವಾಳದಲ್ಲಿ ಆಗಿರುವುದು ಎಲ್ಲವೂ ನನ್ನ ಹಾಗೂ ನಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಗಿರುವುದು ಬಿಟ್ಟರೆ ಬೇರೇನು ಆಗಿಲ್ಲ ಎನ್ನುವುದು ಖಾತ್ರಿಯಾಗುತ್ತದೆ. ನನ್ನ ಅವಧಿಯಲ್ಲಿ ಆರಂಭಿಸಿ ಅರ್ಧದಲ್ಲಿ ಬಾಕಿಯಾದ ಅಂಬೇಡ್ಕರ್ ಭವನ, ಪಂಜೆ ಮಂಗೇಶರಾಯರ ಭವನ, ಒಳಚರಂಡಿ ಯೋಜನೆ, ಬೆಂಜನಪದವು ಕ್ರೀಡಾಂಗಣ, ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ ಇದ್ಯಾವುದನ್ನೂ ಮುಂದುವರಿಸುವ ಕನಿಷ್ಠ ಯೋಗ್ಯತೆಯೂ ಇಲ್ಲದವರು ಇನ್ನು ಯಾವ ಅಭಿವೃದ್ದಿ ಮಾಡಿದ್ದಾರೆ ಎಂಬುದನ್ನು ಕ್ಷೇತ್ರದ ಜನರೇ ಪ್ರಶ್ನಿಸಬೇಕಾಗಿದೆ ಎಂದರು.
ನನ್ನ ಮೇಲೆ ವಿನಾ ಕಾರಣ ಹತ್ಯೆಯಂತಹ ಗಂಭೀರ ಆರೋಪಗಳನ್ನು ಹೊರಿಸಿ ವಾಮಮಾರ್ಗದಲ್ಲಿ ಸೋಲಿಸಿದರು. ಆದರೆ ನಾನು ಯಾವುದೇ ಅಂತಹ ಕೃತ್ಯಗಳಿಗೆ ಬೆಂಬಲವನ್ನೂ ನೀಡಿಲ್ಲ. ನಮ್ಮ ಕಾರ್ಯಕರ್ತರೂ ಕೂಡಾ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿಯೂ ಇಲ್ಲ. ಇದೀಗ ಹತ್ಯಾ ಆರೋಪಿಗಳು ಬಂಟ್ವಾಳ ಶಾಸಕರ ಎಡ ಬಲಗಳಲ್ಲಿ ತಿರುಗಾಡುತ್ತಿರುವುದು ಜನ ಕಣ್ಣಿನಿಂದ ನೋಡುತ್ತಿದ್ದಾರೆ ಎಂದ ರಮಾನಾಥ ರೈ, ಕಾಂಗ್ರೆಸ್ ಗಾಂಧಿ ಹಂತಕನನ್ನು ದ್ರೋಹಿಯಾಗಿಯೇ ಇದುವರೆಗೂ ಕಾಣುತ್ತಲೇ ಬಂದಿದೆ. ಆದರೆ ಗಾಂಧಿ ಹಂತಕನನ್ನೇ ವೈಭವ ಮಾಡುವ ಬಿಜೆಪಿಗರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕುಟುಕಿದರು.
ಕ್ಷೇತ್ರದ ಮತದಾರರಿಗೆ ಅವಮಾನ ಮಾಡುವ ಕೆಲಸ ರಮಾನಾಥ ರೈ ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡಲಾರೆ. ನನ್ನ ಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಇತರ ದರ್ಮಗಳನ್ನು ಗೌರವಿಸುತ್ತಿದ್ದೇನೆ. ಕಾಂಗ್ರೆಸ್ ಯಾವತ್ತೂ ಮತೀಯವಾದಿಗಳ ಜೊತೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.
ಸಿಡಿ, ಇಡಿ, ಬೇಡಿ ಮೂಲಕ ಉಸಿರಾಡುತ್ತಿರುವ ಬಿಜೆಪಿ ಸರಕಾರ, ರಾಹುಲ್ ಗಾಂಧಿಗೆ ಅನುರಿಸಿದ ನೀತಿ ಪ್ರಾಮಾಣಿಕವಾಗಿ ಅನುಸರಿಸಿದರೆ ಬಿಜೆಪಿ ನಾಯಕರೆಲ್ಲ ಅನರ್ಹರು : ಎಂ ಜಿ ಹೆಗ್ಡೆ ವಾಗ್ದಾಳಿ
ಚಿಂತಕ, ಬರಹಗಾರ, ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಎಂ ಜಿ ಹೆಗ್ಡೆ ಮಾತನಾಡಿ, ಸಿಡಿ, ಇಡಿ ಹಾಗೂ ಬೇಡಿ ಇದು ಮಾತ್ರ ಬಿಜೆಪಿಗರ ಮೂರು ಅಸ್ತ್ರವಾಗಿದೆ. ಇದನ್ನು ಇಟ್ಟುಕೊಂಡು ಅಧಿಕಾರ ಶಾಶ್ವತವಾಗಿಸುವ ಹುಚ್ಚು ಪಯತ್ನ ನಡೆಸುತ್ತಿದ್ದಾರೆ. ಸ್ವಪಕ್ಷದವರನ್ನು ನಿಯಂತ್ರಿಸಲು ಸಿಡಿಯನ್ನು ಬಳಸಿಕೊಂಡರೆ, ವಿರೋಧ ಪಕ್ಷದವರನ್ನು ನಿಯಂತ್ರಿಸಲು ಇಡಿ ಹಾಗೂ ಸರಕಾರ ಹಾಗೂ ನಾಯಕರನ್ನು ಪ್ರಶ್ನೆ ಮಾಡುವವರನ್ನು ನಿಯಂತ್ರಿಸಲು ಬೇಡಿಯನ್ನು ಬಳಸಲಾಗುತ್ತಿರುವುದು ವಾಡಿಕೆಯಾಗಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ವಿಷಯದಲ್ಲಿ ನ್ಯಾಯಾಲಯ ಅನುಸರಿಸಿದ ನೀತಿಯನ್ನು ಎಲ್ಲಾ ಪ್ರಕರಣಗಳಲ್ಲೂ ಪ್ರಾಮಾಣಿಕವಾಗಿ ಅನುಸರಿಸಿದರೆ ಬಿಜೆಪಿಯ 75% ಶಾಸಕರು ಸಂಸದರು ಅನರ್ಹರಾಗುವುದು ಖಂಡಿತ. ಎಲ್ಲ ಬಿಜೆಪಿ ನಾಯಕರು ಇಂದು ಜೈಲು ಕಂಬಿ ಎಣಿಸುತ್ತಿದ್ದರು ಎಂದು ಎಂ ಜಿ ಹೆಗ್ಡೆ ಕಾಂಗ್ರೆಸ್ ಹಿಂದಿನಿಂದಲೂ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ನಿಲುವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಪ್ರಬುದ್ದ ಸಂಸದೀಯ ಪಟುಗಳು ಯಾವತ್ತೂ ಸಂಸತ್ತಿನಲ್ಲಿ ಇರಬೇಕು ಎಂದು ಅಂತಹವರ ವಿರುದ್ದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನೇ ಹಾಕುತ್ತಿರಲಿಲ್ಲ. ಆ ಮೂಲಕ ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್ ಪ್ರಯತ್ನ ಪಟ್ಟರೆ, ಇಂದು ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ಪೂರ್ಣವಾಗಿ ಮುಗಿಸಲು ನೋಡುತ್ತಿದೆ. ಆದರೆ ಇದ್ಯಾವುದೂ ಫಲ ನೀಡುವುದಿಲ್ಲ. ಇವರ ಕುಟಿಲತೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ಈ ಬಾರಿ ಮತದಾರರು ಯಾವುದೇ ಕಾರಣಕ್ಕೂ ಭಾವನಾತ್ಮಕ ವಿಷಯಗಳಿಗೆ ಚುನಾವಣೆಯನ್ನು ವೇದಿಕೆಯಾಗಿ ಬಳಸುವಂತಾಗಬಾರದು ಎಂದು ಮನವಿ ಮಾಡಿದ ಎಂ ಜಿ ಹೆಗ್ಡೆ ಕಾಂಗ್ರೆಸ್ಸಿಗೆ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟುವ ಬಿಜೆಪಿಗರದ್ದು ಕೇವಲ ರಾಜಕೀಯ ಗಿಮಿಕ್ ಎಂದರು. ಇಂದಿರಾ ಗಾಂಧಿ ಜಾರಿಗೆ ತಂದ ರೇಶನ್ ಕಾರ್ಡ್ ಗಳನ್ನು ಹಿಂದುಗಳಿಗೂ ಹಂಚಿದ್ದಾರೆ. ಸಿದ್ದರಾಮಯ್ಯ ಜಾರಿಗೆ ಅನ್ನಭಾಗ್ಯ ಹಿಂದುಗಳೂ ಅನುಭವಿಸುತ್ತಿದ್ದಾರೆ. ಇದೀಗ ಇವರ ಕುಟಿಲ ಹಾಗೂ ಕಪಟತೆಯಿಂದಾಗಿ ಹಿಂದುತ್ವದ ಅಮಲಿನ ಕೋಟೆಯಲ್ಲೂ ಬಿರುಕು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಅದೆಲ್ಲವೂ ಲಾವಾರಸವಾಗಿ ಸ್ಫೋಟಗೊಳ್ಳಲಿದೆ ಎಂದ ಹೆಗ್ಡೆ ದ್ವೇಷ ಅಸೂಯೆ ಅಸಹನೆ ಯಾವತ್ತೂ ಬೇಡ ಎಂದರು.
ರಾಹುಲ್ ಗಾಂಧಿಯಂತಹ ಅನೇಕ ಘಟನೆಗಳನ್ನು ಕಾಂಗ್ರೆಸ್ ಹಿಂದಿನಿಂದಲೂ ಜೀರ್ಣಿಸಿಕೊಂಡು ಬಂದಿದೆ. ಇದೂ ಕೂಡಾ ಹತ್ತರ ಜೊತೆ ಹನ್ನೊಂದು ಆಗಲಿದೆಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಏನು ಮಾಡಲು ಇವರಿಂದ ಸಾಧ್ಯವಿಲ್ಲ ಎಂದ ಎಂ ಜಿ ಹೆಗ್ಡೆ ಪಾನ್-ಆಧಾರ್ ಲಿಂಕಿಂಗ್ ಹೆಸರಿನಲ್ಲೂ ಇದೀಗ ಲೂಟಿ ಹೊಡೆಯಲು ಹೊರಟಿರುವ ಇರದ್ದು ಲೂಟಿಕೋರ ಸರಕಾರ. ಸಾರ್ವಜನಿಕರೇ ಪಾನ್-ಆಧಾರ್ ಲಿಂಕ್ ಮಾಡಲು ಬಣ್ಣದ ಮಾತುಗಳ ಮೂಲಕ ಅಧಿಕಾರಕ್ಕೆ ಬಂದವರು ನಿಮ್ಮ ಸಾವಿರ ರೂಪಾಯಿ ದಂಡವನ್ನು ಕಟ್ಟಲಾರರು. ಅದನ್ನು ನೀವೇ ಕಟ್ಟಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಹಸೈನಾರ್ ತಾಳಿಪಡ್ಪು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ಪ್ರಮುಖರಾದ ಜಗದೀಶ್ ಕೊಯಿಲ, ಸಂಪತ್ ಕುಮಾರ್ ಶೆಟ್ಟಿ, ಉಮೇಶ್ ಬೋಳಂತೂರು, ಕೆ ಎಚ್ ಖಾದರ್ ಅರಳ, ಉಮೇಶ್ ನಾಟಿ, ಉಮೇಶ್ ಕುಲಾಲ್ ನಾವೂರು, ಸುರೇಶ್ ನಾವೂರು, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಚಂದ್ರಶೇಖರ ಪೂಜಾರಿ, ಸುದರ್ಶನ ಜೈನ್, ರಾಜೀವ್ ಶೆಟ್ಟಿ ಎಡ್ತೂರು, ಬಾಲಕೃಷ್ಣ ಆಳ್ವ ಕೊಡಾಜೆ, ಸಂಜೀವ ಪೂಜಾರಿ ಬೊಳ್ಳಾಯಿ, ರಮೇಶ ಪಣೋಲಿಬೈಲು, ಸ್ಟೀವನ್ ಡಿಸೋಜ, ಸಿದ್ದೀಕ್ ಸರವು, ರಾಜೇಶ್ ರೋಡ್ರಿಗಸ್, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ಐಡಾ ಸುರೇಶ್, ಬಿ ಮೋಹನ್, ಶಿವಪ್ರಸಾದ್ ಕನಪಾಡಿ, ಮಧುಸೂಧನ್ ಶೆಣೈ, ಮನೋಜ್ ಕನಪಾಡಿ. ದಿವಾಕರ ಪಂಬದಬೆಟ್ಟು, ರವಿರಾಜ್ ಜೈನ್, ಚಂದ್ರಶೇಖರ್ ಭಂಡಾರಿ, ಜಗದೀಶ್ ಕಂಜತ್ತೂರ್, ಯೋಗೇಶ್ ಜ್ಯೋತಿಗುಡ್ಡೆ, ಧನಂಜಯ ಪಂಬದಬೆಟ್ಟು, ನಾಗೇಶ್ ಶೆಟ್ಟಿ ಪರಿಯೋಡಿ ಬೀಡು, ಕಮಲಾಕ್ಷ ಮುಂಡಾಜೆ, ರಮೇಶ್ ಪಚ್ಚಿನಡ್ಕ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment