ಬಂಟ್ವಾಳ, ಮಾರ್ಚ್ 19, 2023 (ಕರಾವಳಿ ಟೈಮ್ಸ್) : 2018 ರ ಚುನಾವಣಾ ಫಲಿತಾಂಶ ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಹಿತ್ತಲ ಮದ್ದಿನಂತಿರುವ ದಕ್ಷ ಪ್ರಾಮಾಣಿಕ ಶ್ರೇಷ್ಠ ರಾಜಕಾರಣಿಯಾಗಿರುವ ರಮಾನಾಥ ರೈ ಅವರನ್ನು ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆ ರಾಜ್ಯದ ಜನ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಿಸದಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಬಂಟ್ವಾಳದ ಜನತೆಗೆ ಕರೆ ನೀಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 9ನೇ ದಿನ ಶನಿವಾರ (ಮಾ 18) ಕನ್ಯಾನ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಧರ್ಮವನ್ನು ಆಚರಿಸುವುದರ ಜೊತೆಗೆ ಪರಧರ್ಮವನ್ನು ಗೌರವಿಸಿ, ಕೋಮುವಾದಿ ಭಾವನೆಯನ್ನು ಸಮಾಜದಲ್ಲಿ ಯಾವತ್ತೂ ಬೆಂಬಲಿಸದಿರಿ. ಅದು ಎಲ್ಲಾ ಸಮುದಾಯಕ್ಕೂ ಮಾರಕ ಎಂದು ಕಿವಿ ಮಾತು ಹೇಳಿದರು.
ರಮಾನಾಥ ರೈಗಳ ಗೆಲುವು ಕೇವಲ ಬಂಟ್ವಾಳದ ಜನರ ಗೆಲುವಲ್ಲ. ಅದು ದಕ್ಷಿಣ ಕನ್ನಡ ಜಿಲ್ಲೆಯ ಜನರ ಗೆಲುವಾಗಲಿದೆ. ರಾಜಕೀಯ ಇರುವುದು ಕ್ಷೇತ್ರದ ಅಭಿವೃದ್ದಿಗಾಗಿ ಹೊರತು ಭಾವನಾತ್ಮಕವಾಗಿ ಮಾತನಾಡೋಕಲ್ಲ ಎಂದ ಭರತ್ ಮುಂಡೋಡಿ ಮೋದಿ ಅವರು ಪ್ರಧಾನಿ ಆಗುವ ಪೂರ್ವದಲ್ಲಿ ಮಾಡಿದ ಸುಳ್ಳುಗಳ ಸರಮಾಲೆಯ ಭಾಷಣಗಳನ್ನು ಈಗ ಮತ್ತೊಮ್ಮೆ ಕೇಳಿದರೆ ಸ್ವತಃ ತನ್ನ ವೋಟನ್ನೇ ತನಗೆ ಹಾಕಲಿಕ್ಕಿಲ್ಲ ಎಂಬ ಶಶಿ ತರೂರ್ ಮಾತನ್ನು ಇದೇ ವೇಳೆ ಉಲ್ಲೇಖಿಸಿ ವ್ಯಂಗ್ಯವಾಡಿದರು.
ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರಕಾರ ನಾನು ನೋಡಿಯೇ ಇಲ್ಲ. ಬೆಳಿಗ್ಗೆ ಆದೇಶ ಹೊರಡಿಸಿ ಸಂಜೆ ವಾಪಾಸು ಪಡಕೊಳ್ಳುವ ಸರಕಾರ ಇದು ಎಂದ ಅವರು ರಮಾನಾಥ ರೈ ಅವರಿಗೆ ಬಂಟ್ವಾಳದ ಜನತೆಯ ಮೇಲೆ ಋಣ ಇದೆ ಎಂದು ಇಷ್ಟೆಲ್ಲ ಸಾವಿರ ಕೋಟಿ ರೂಪಾಯಿಗಳ ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ. ಆದರೆ ರೈ ಅವರು ಕೇವಲ ತನ್ನ ಕ್ಷೇತ್ರದ ಜನರ ಹಿತ ಮಾತ್ರ ಬಯಸಿಲ್ಲ. ಜೊತೆಗೆ ಇತರ ಕ್ಷೇತ್ರಗಳ ಜನರ ಹಿತವನ್ನೂ ಬಯಸಿದ್ದಾರೆ ಎಂಬುದಕ್ಕೆ ನಮ್ಮ ಸುಳ್ಯ ಕ್ಷೇತ್ರ ಜೀವಂತ ಸಾಕ್ಷಿಯಾಗಿದೆ. ಸುಳ್ಯ ಕೆ ಆರ್ ಟಿ ಸಿ ಬಸ್ ಡಿಪೆÇೀ, ಕಡಬ ತಾಲೂಕು ರಚನೆ, ಸುಳ್ಯದಲ್ಲಿರುವ ಶ್ರೀಲಂಕಾ ಮೂಲದ ತಮಿಳರಿಗೆ ಅತ್ಯಂತ ಕಠಿಣವಾಗಿದ್ದ ಜಾತಿ ಸರ್ಟಿಫಿಕೇಟ್ ಕೊಡಿಸಿದ ಖ್ಯಾತಿಯೂ ರಮಾನಾಥ ರೈಗಳಿಗೆ ಸಲ್ಲುತ್ತದೆ. ಜೊತೆಗೆ ಕೊಯಿಲದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಕಾಲೇಜು ಕೂಡಾ ಸುಳ್ಯಕ್ಕೆ ರಮಾನಾಥ ರೈಗಳ ಕೊಡುಗೆ ಎಂದು ಬಣ್ಣಿಸಿದರು.
ಇದೀಗ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದು ಶತಸ್ಸಿದ್ದ. ಕಾಂಗ್ರೆಸ್ ಯಾವತ್ತೂ ನುಡಿದಂತೆ ನಡೆದ ಇತಿಹಾಸವಿರುವ ಪಕ್ಷ. ದೇಶದ ಬಡ ಜನರ ಏಳಿಗೆಯನ್ನು ಬಯಸಿದ ಏಕೈಕ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ನಾಯಕರ ಇತಿಹಾಸವೂ ಜನತೆಗಾಗಿ ತ್ಯಾಗ-ಬಲಿದಾನ ಮಾಡಿರುವ ಇತಿಹಾಸವಾಗಿದೆ. ಈ ನಿಟ್ಟಿನಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಬಗ್ಗೆ ಕಿಂಚಿತ್ತೂ ಸಂಶಯ ಪಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿಗಳನ್ನು ಚುನಾಯಿಸಿ ತಮ್ಮ ಗ್ಯಾರಂಟಿಗಳನ್ನು ಪಡೆದುಕೊಳ್ಳಿ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಬಂಟ್ವಾಳದ ಜನತೆಯ ಋಣ ತೀರಿಸಲು ಜನ್ಮಜನ್ಮಾಂತರಲ್ಲೂ ಸಾಧ್ಯವಿಲ್ಲ. ಆದರೂ ಕೊನೆಯ ಅವಕಾಶದಲ್ಲಿ ಜನ ಚುನಾಯಿಸಿದರೆ ಸಾಧ್ಯವಾದಷ್ಟರ ಮಟ್ಟಿಗೆ ತಮ್ಮ ಋಣಕ್ಕೆ ಪೂರಕವಾಗಿ ಕೆಲಸ ಮಾಡಲು ಬದ್ದನಾಗಿದ್ದು, ಬಳಿಕವೂ ಪಕ್ಷ ಹಾಗೂ ಕ್ಷೇತ್ರದ ಜನರ ನಡುವೆ ಸೇವಕನಾಗಿ ದುಡಿಯುವುದಾಗಿ ಭರವಸೆಯಿತ್ತರು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಹಸೈನಾರ್ ತಾಳಿಪಡ್ಪು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ತಾ ಪಂ ಮಾಜಿ ಉಪಾಧ್ಯಕ್ಷ ಹಾಜಿ ಉಸ್ಮಾನ್ ಕರೋಪಾಡಿ, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಪಿ ಎ. ರಹೀಂ ಬಿ ಸಿ ರೋಡು, ಸಿದ್ದೀಕ್ ಸರವು, ಅಮಾನುಲ್ಲಾ ಗುಡ್ಡೆಅಂಗಡಿ, ಪ್ರವೀಣ್ ರೋಡ್ರಿಗಸ್ ವಗ್ಗ, ಅನ್ವರ್ ಕರೋಪಾಡಿ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ಮೊದಲಾದವರು ಭಾಗವಹಿಸಿದ್ದರು.
0 comments:
Post a Comment