ಮದುವೆಯಾಗದ, ಮಕ್ಕಳಿಲ್ಲದ ಡಝನ್ ಗಟ್ಟಲೆ ನಾಯಕರನ್ನು ಬಗಲಲ್ಲೇ ಇರಿಸಿಕೊಂಡು ರಾಹುಲ್ ಗಾಂಧಿ ಮದುವೆ ಬಗ್ಗೆ ಮಾತನಾಡುವ ನಳಿನ್ ಕುಮಾರಗೆ ಮಾನ-ಮರ್ಯಾದೆ ಇದೆಯೇ : ಶಾಹುಲ್ ಹಮೀದ್ ಕುಹಕ - Karavali Times ಮದುವೆಯಾಗದ, ಮಕ್ಕಳಿಲ್ಲದ ಡಝನ್ ಗಟ್ಟಲೆ ನಾಯಕರನ್ನು ಬಗಲಲ್ಲೇ ಇರಿಸಿಕೊಂಡು ರಾಹುಲ್ ಗಾಂಧಿ ಮದುವೆ ಬಗ್ಗೆ ಮಾತನಾಡುವ ನಳಿನ್ ಕುಮಾರಗೆ ಮಾನ-ಮರ್ಯಾದೆ ಇದೆಯೇ : ಶಾಹುಲ್ ಹಮೀದ್ ಕುಹಕ - Karavali Times

728x90

16 March 2023

ಮದುವೆಯಾಗದ, ಮಕ್ಕಳಿಲ್ಲದ ಡಝನ್ ಗಟ್ಟಲೆ ನಾಯಕರನ್ನು ಬಗಲಲ್ಲೇ ಇರಿಸಿಕೊಂಡು ರಾಹುಲ್ ಗಾಂಧಿ ಮದುವೆ ಬಗ್ಗೆ ಮಾತನಾಡುವ ನಳಿನ್ ಕುಮಾರಗೆ ಮಾನ-ಮರ್ಯಾದೆ ಇದೆಯೇ : ಶಾಹುಲ್ ಹಮೀದ್ ಕುಹಕ

ಜನರ ಪ್ರೀತಿಯೇ ರಮಾನಾಥ ರೈ ಅವರ ಉಸಿರು, ಗೆದ್ದರೂ-ಸೋತರೂ ದಿನವಿಡೀ ಜನರ ಮಧ್ಯೆ ಇರುವ ಅಪರೂಪದ ರಾಜಕಾರಣಿ ರೈಗಳು


ಬಂಟ್ವಾಳದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಹಾಗೂ ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ : ರೈ ಭರವಸೆ 


ಬಂಟ್ವಾಳ, ಮಾರ್ಚ್ 17, 2023 (ಕರಾವಳಿ ಟೈಮ್ಸ್) : ನಾಯಕರನ್ನು ಬಲಿ ಕೊಟ್ಟು ದೇಶ ಉಳಿಸಿದ ಪಕ್ಷ ಎಂಬ ಹುತಾತ್ಮರ ಇತಿಹಾಸ ಇರುವ ಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದ್ದರೆ, ಕಾರ್ಯಕರ್ತರನ್ನು ಬಲಿಕೊಟ್ಟು ಪಕ್ಷ ಕಟ್ಟಿದ ಇತಿಹಾಸ ಮಾತ್ರ ಬಿಜೆಪಿ ಪಕ್ಷಕ್ಕಿದೆ. ಇದುವೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕಿರುವ ದೊಡ್ಡ ವ್ಯತ್ಯಾಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್ ಹೇಳಿದರು. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 6ನೇ ದಿನ ಗುರುವಾರ (ಮಾ 16) ಲೊರೆಟ್ಟೊಪದವು ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಂಡರಸರ ಕೈಯಲ್ಲಿ ಹರಿದು ಹಂಚಿ ಹೋಗಿದ್ದ ದೇಶವನ್ನು ತ್ರಿವರ್ಣ ಧ್ವಜದಡಿ ಒಂದೇ ದೇಶವಾಗಿ ಕಟ್ಟಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಮಾಡಿದ ತ್ಯಾಗ-ಕೆಲಸ ನೋಡಿದರೆ ಈ ದೇಶದ ಜನ ಬೇರೆ ಪಕ್ಷಕ್ಕೆ ಓಟು ಕೊಡಲು ಸಾಧ್ಯವೇ ಇಲ್ಲ ಎಂದರು. 

ಈ ಬಾರಿ ಎಲ್ಲ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಮುಂದಿದೆ. ರೈಗಳ ವಿಜಯವನ್ನೂ ಸಮೀಕ್ಷೆಗಳು ಬಹಿರಂಗಪಡಿಸಿದೆ. ಇದರಿಂದ ವಿರೋಧ ಪಕ್ಷ ಬಿಜೆಪಿ ಚಡಪಡಿಸುತ್ತಿದೆ ಎಂದ ಶಾಹುಲ್ ಹಮೀದ್ ಕಾಂಗ್ರೆಸ್ ಸರಕಾರ ಒಂದು ಸಿಲಿಂಡರ್ ಬೆಲೆಯನ್ನು ಕಿಂಚಿತ್ ಏರಿಸಲು ಐವತ್ತು ವರ್ಷ ಬೇಕಾದರೆ, ಬಿಜೆಪಿ ಬರೇ ಏಳು ವರ್ಷದಲ್ಲೇ ಸಾವಿರಾರು ರೂಪಾಯಿ ದಾಟಿಸಿ ದಾಖಲೆ ಮೆರೆದಿದೆ ಎಂದು ವ್ಯಂಗ್ಯವಾಡಿದರು. 

ಮದುವೆಯಾಗದ ಮಕ್ಕಳಿಲ್ಲದ ಡಜನ್ ಗಟ್ಟಲೆ ನಾಯಕರನ್ನು ಬಗಲಲ್ಲಿರಿಸಿಕೊಂಡು ರಾಹುಲ್ ಗಾಂಧಿಯ ಮದುವೆಯ ಬಗ್ಗೆ ಮಾತನಾಡುವ ನಳಿನ್ ಕುಮಾರ್ ಕಟೀಲಗೆ ಮಾನ ಮರ್ಯಾದೆ ಎಂಬುದು ಇದೆಯಾ? ನೈತಿಕತೆ ಮಾನವ ಗೌರವ ಏನೆಂಬುದು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಗೊತ್ತಿದೆಯೇ? ತಾಕತ್ ಇದ್ದರೆ ಅಭಿವೃದ್ದಿ ವಿಚಾರಗಳ ಬಗ್ಗೆ ವಿಚಾರ ಮಂಡಿಸಿ ಮತ ಗಳಿಸಿ. ಮಕ್ಕಳಾಟಿಕೆಯ ಚರ್ಚೆ ಇನ್ನು ಮುಂದೆ ನಡೆಯದು. ಜನ ಪ್ರಬುದ್ದರಾಗಿದ್ದಾರೆ. ಒಂದು ಬಾರಿ ಜನ ನಿಮ್ಮ ಅಪಪ್ರಚಾರ, ಅಸತ್ಯದ ಮಾತುಗಳನ್ನು ನಂಬಿ ಬಲಿಯಾಗಿರಬಹುದು. ಆದರೆ ಇದೀಗ ಎಲ್ಲದಕ್ಕೂ ಕಾಲವೇ ಉತ್ತರಿಸಿದೆ. ಈ ನಿಟ್ಟಿನಲ್ಲಿ ಜನ ರೈಗಳನ್ನು ಗೆಲ್ಲಿಸಿ ಮಂತ್ರಿ ಮಾಡಲು ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದರು. 

ಒಂದು ಬಾರಿ ಎಂಎಲ್‍ಎ ಆದವರ ಬಗ್ಗೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಹೆಸರು ಕೇಳಿ ಬಂದರೆ, ಆರು ಬಾರಿ ಶಾಸಕರಾಗಿ ಹದಿಮೂರು ವರ್ಷ ಮಂತ್ರಿಯಾದ ರೈಗಳ ಬಗ್ಗೆ ಇದುವರೆಗೂ ನಯಾಪೈಸೆ ಭ್ರಷ್ಟಾಚಾರದ ಗಂಧಗಾಳಿಯೂ ಹ್ತತಿರ ಸುಳಿದಿಲ್ಲ ಎಂದರೆ ರೈಗಳ ಶುಭ್ರ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದ ಶಾಹುಲ್ ಹಮೀದ್ ಮತದಾರರು ಭಾವನಾತ್ಮಕ ವಿಷಯಗಳಿಗೆ ಬೆನ್ನು ಹಾಕಿ ಯೋಚನೆ ಮಾಡಿ ಮತ ನೀಡುವ ಕಾಲ ಬಂದಿದೆ ಎಂದರು. 

ಬಂಟ್ವಾಳ ಅಂದರೆ ರೈಗಳು, ರೈಗಳು ಅಂದರೆ ಬಂಟ್ವಾಳ. ರೈಗಳ ಉಸಿರೇ ಜನರ ಪ್ರೀತಿ. ಸೋತರೂ ಗೆದ್ದರೂ ಜನರ ಮಧ್ಯದಲ್ಲೇ ಇರುವ ಅಪರೂಪದ ರಾಜಕಾರಣಿಯಾಗಿದ್ದಾರೆ ರಮಾನಾಥ ರೈಗಳು. ಮುಂದಿನ ತಲೆಮಾರಿನ ಬಗ್ಗೆ ಯೋಚಿಸುವ ರಾಜಕೀಯ ಮುತ್ಸದ್ದಿಯಾಗಿದ್ದಾರೆ ರಮಾನಾಥ ರೈಗಳು. ರೈಗಳು ಕೇವಲ ಚುನಾವಣಾ ಮತ ಗಳಿಕೆಯ ರಾಜಕಾರಣಿಯಲ್ಲ ಎಂದರು. 


ಬಂಟ್ವಾಳದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಹಾಗೂ ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ : ರೈ ಭರವಸೆ 


ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ಜಿ ಪಂ, ತಾ ಪಂ ಚುನಾವಣೆ ನಡೆಸದೆ ಸ್ಥಳೀಯಾಡಳಿತದ ಮೂಲಕ ಸೌಲಭ್ಯ ಪಡೆಯುವ ಜನರ ಹಕ್ಕಿಗೆ ಬೊಮ್ಮಾಯಿ ಸರಕಾರ ಕಲ್ಲು ಹಾಕಿದೆ. ಜಿ ಪಂ, ಪುರಸಭಾ ನಗರೋತ್ಥಾನ ದುಡ್ಡುಗಳನ್ನೂ ಹಂಚುವವರು ಶಾಸಕರು. ಶಾಸಕರನ್ನು ಸರ್ವಾಧಿಕಾರಿ ಮಾಡುವ ಮೊದಲ ಅಜೆಂಡಾ ಬೊಮ್ಮಾಯಿ ಸರಕಾರದ್ದು ಎಂದರಲ್ಲದೆ ಕೊಲೆ ಮಾಡಿದವರು ಇಂದಿಗೂ ಬಿಜೆಪಿ ಕಾರ್ಯಕರ್ತರಾಗಿರುವುದು ಸೋಜಿಗದ ಸಂಗತಿ. ಅರಗಿಸಿಕೊಳ್ಳಲಾಗದ ಸತ್ಯ. ಪಂಚಾಯತ್ ಚುನಾವಣೆಯ ಮೀಸಲಾತಿಯಲ್ಲೂ ಹಸ್ತಕ್ಷೇಪ ಮಾಡಿ ಅರ್ಹರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮಾಡುವ ಹುನ್ನಾರ ಬಿಜೆಪಿ ಸರಕಾರದ್ದು ಎಂದರು. 

ಮುಂದಿನ ಬಾರಿ ಗೆದ್ದು ಬಂದಲ್ಲಿ ಬೆಂಜನಪದವಿನಲ್ಲಿ 100 ಕೋಟಿ ವೆಚ್ಚದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡುವುದರ ಜೊತೆಗೆ ಬಂಟ್ವಾಳದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರು ಅತೀ ಹೆಚ್ಚು ನೆಚ್ಚಿಕೊಂಡಿರುವ ಅಂಡರ್ ಆರ್ಮ್ ಕ್ರಿಕೆಟ್ ಕ್ರೀಡಾಂಗಣವನ್ನು ಬಂಟ್ವಾಳದಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದರು. 

ಯಾತ್ರೆ ವೇಳೆ ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ರಮಾನಾಥ ರೈ ನೇತೃತ್ವದ ನಿಯೋಗ ಆಶೀರ್ವಾದ ಪಡೆದುಕೊಂಡರು. ಲೊರೆಟ್ಟೊಪದವು ಜಂಕ್ಷನ್ನಿನಲ್ಲಿ ಯಾತ್ರಾ ಸಂಚಾಲಕ ಪಿಯೂಸ್ ರೋಡ್ರಿಗಸ್ ಹಾಗೂ ಬಿ ಕಸ್ಬಾ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕ್ರೇನ್ ಮೂಲಕ ಪುಷ್ಪವೃಷ್ಟಿ ಸುರಿಸಿ ರಮಾನಾಥ ರೈ ಅವರಿಗೆ ವಿಶೇಷ ಸ್ವಾಗತ ಕೋರಲಾಯಿತು. ಇದೇ ವೇಳೆ ಪಕ್ಷದ ವಿವಿಧ ಜವಾಬ್ದಾರಿ ವಹಿಸಿದವರಿಗೆ ನೇಮಕ ಪತ್ರ ಹಸ್ತಾಂತರಿಸಲಾಯಿತು. 

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಜನಾರ್ದನ ಚೆಂಡ್ತಿಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ತಾ ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಬಿ ಕಸ್ಬಾ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರೋಡ್ರಿಗಸ್, ಪ್ರಮುಖರಾದ  ಪಿ.ಎ. ರಹೀಂ, ಉಮೇಶ್ ಕುಲಾಲ್, ಜಗದೀಶ್ ಕೊಯಿಲ, ಸ್ಟೀವನ್ ಡಿಸೋಜ, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ರಾಜೀವ್ ಕಕ್ಕೆಪದವು, ವೆಂಕಪ್ಪ ಪೂಜಾರಿ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ಅಲ್ತಾಫ್ ಸಂಗಬೆಟ್ಟು, ರಂಜಿತ್ ಪೂಜಾರಿ, ಆಲ್ಬರ್ಟ್ ಮೆನೆಜಸ್ ಮೊದಲಾದವರು ಭಾಗವಹಿಸಿದ್ದರು. 

ಬಂಟ್ವಾಳ ಪುರಸಭಾ ಸದಸ್ಯ ಬಿ ವಾಸು ಪೂಜಾರಿ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುದರ್ಶನ್ ಜೈನ್ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮದುವೆಯಾಗದ, ಮಕ್ಕಳಿಲ್ಲದ ಡಝನ್ ಗಟ್ಟಲೆ ನಾಯಕರನ್ನು ಬಗಲಲ್ಲೇ ಇರಿಸಿಕೊಂಡು ರಾಹುಲ್ ಗಾಂಧಿ ಮದುವೆ ಬಗ್ಗೆ ಮಾತನಾಡುವ ನಳಿನ್ ಕುಮಾರಗೆ ಮಾನ-ಮರ್ಯಾದೆ ಇದೆಯೇ : ಶಾಹುಲ್ ಹಮೀದ್ ಕುಹಕ Rating: 5 Reviewed By: karavali Times
Scroll to Top