ಬಂಟ್ವಾಳ ಮಾರ್ಚ್ 06, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 25ರ ಗುಡ್ಡೆಅಂಗಡಿ ಎಂಬಲ್ಲಿ ತಡೆಗೋಡೆ ಕಾಮಗಾರಿಯ ಟೆಂಡರ್ ವಹಿಸಿರುವ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಸ್ಥಳೀಯರು ತೀವ್ರ ಕಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3.75 ಲಕ್ಷ ರೂಪಾಯಿ ಮೊತ್ತದ ತಡೆಗೋಡೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರ ಅರ್ಧಂಬರ್ದ ಕಾಮಗಾರಿ ನಡೆಸಿ 4 ತಿಂಗಳು ಕಳೆದರೂ ಕಾಮಗಾರಿ ಪೂರ್ತಿಗೊಳಿಸಿಲ್ಲ. ಕಾಮಗಾರಿಗೆ ಸಂಬಂಧಿಸಿದ ಸಾಮಾಗ್ರಿಗಳೆಲ್ಲವೂ ಸಾರ್ವಜನಿಕ ರಸ್ತೆಯಲ್ಲಿ ಹಾಗೂ ಖಾಸಗಿ ವ್ಯಕ್ತಿಗಳ ಮನೆಯಂಗಳದಲ್ಲೇ ರಾಶಿ ಹಾಕಿದ್ದು ಸಾರ್ವಜನಿಕರು ನಡೆದಾಡಲೂ ಆಗದಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಪುರಸಭಾಧಿಕಾರಿಗಳಿಗೆ ದೂರು ನೀಡಿದರೂ ಪರಿಣಾಮ ಶೂನ್ಯವಾಗಿರುವ ಹಿನ್ನಲೆಯಲ್ಲಿ ಇದೀಗ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
ಪುರಸಭಾ ಉಪಾಧ್ಯಕ್ಷರ ವಾರ್ಡಿನಲ್ಲೇ ಗುತ್ತಿಗೆದಾರ ಈ ರೀತಿಯಾಗಿ ನಿರ್ಲಕ್ಷ್ಯ ವಹಿಸಿದರೆ ಇನ್ನುಳಿದ ವಾರ್ಡ್‍ಗಳಲ್ಲಿ ಇಂತಹ ಗುತ್ತಿಗೆದಾರರ ಕಾಮಗಾರಿಯ ಗತಿ ಹೇಗಿರಬಹುದು ಎಂದು ಪ್ರಶ್ನಿಸಿರುವ ನೊಂದ ವಾರ್ಡ್ ನಾಗರಿಕರು ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಸುರಿಯಲಾರಂಭಿಸಿದರೆ ಈ ಪ್ರದೇಶದ ಸನ್ನಿವೇಶವನ್ನು ಊಹಿಸುವುದೇ ಕಷ್ಟ ಸಾಧ್ಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರಲ್ಲದೆ ತಕ್ಷಣ ಇಲ್ಲಿನ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರು ನಡೆದಾಡುವ ರಸ್ತೆಯನ್ನು ಸಂಚಾರ ಮುಕ್ತಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸ¨s Á ಕಾರ್ಯಾಲಯದ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿಗಳು, ನಗರಾಭಿವೃದ್ದಿ ಕೋಶದ ನಿರ್ದೇಶಕರುಗಳು ಗಮನ ಹರಿಸಿ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಗುತ್ತಿಗೆ ಹಾಗೂ ವರ್ಕ್ ಆರ್ಡರ್ ವಾಪಾಸು ಪಡೆದು ಸಮರ್ಪಕ ಗುತ್ತಿಗೆದಾರರಿಗೆ ವಹಿಸಿಕೊಡುವಂತೆ ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕರುಗಳೂ ಕೂಡಾ ಇಂತಹ ಗುತ್ತಿಗೆದಾರರ ಮೇಲೆ ನಿಗಾ ವಹಿಸಿ ಅಂತಹವರಿಗೆ ಯಾವುದೇ ಕಾಮಗಾರಿಯ ಗುತ್ತಿಗೆ ವಹಿಸದಂತೆ ಕ್ರಮ ಕೈಗೊಳ್ಳುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment