ಬಂಟ್ವಾಳ, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ಅಧಿಕಾರದ ಕೊನೆ ದಿನದಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಯೋಜನೆಗೆ ಶಾಸಕ ಯು ರಾಜೇಶ್ ನಾಯಕ್ ಬುಧವಾರ ತರಾತುರಿಯ ಶಿಲಾನ್ಯಾಸ ನೆರವೇರಿಸಿದ ಬಗ್ಗೆ ಪುರವಾಸಿಗಳು ತೀವ್ರ ಅಸಮಾಧಾನದ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ.
ಪುರಸಭಾ ವ್ಯಾಪ್ತಿಯ 2ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮ ಬುಧವಾರ (ಮಾ 29) ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಿ ಮಾಹಿತಿ ನೀಡಲಾಗಿತ್ತು. ಆದರೆ ಬುಧವಾರ ಬೆಳಿಗ್ಗೆ 11.30ಕ್ಕೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಘೋಷಿಸುತ್ತಾರೆ ಎಂಬ ಸುದ್ದಿ ಬರುತ್ತಲೇ 12 ಗಂಟೆಗೆ ಇದ್ದ ಶಿಲಾನ್ಯಾಸ ಕಾರ್ಯಕ್ರಮವನ್ನು ತರಾತುರಿಯಲ್ಲಿ ಬೆಳಿಗ್ಗೆ 10.30ಕ್ಕೆ ಮಾಡಿ ಮುಗಿಸಲಾಗಿದೆ.
ಬಂಟ್ವಾಳ ಪುರಸಭೆಯಲ್ಲಿ ಹಲವು ಸಮಸ್ಯೆಗಳಿದ್ದರೂ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಪದೇ ಪದೇ ಶಾಸಕರ ಗಮನ ಸೆಳೆಯುತ್ತಲೇ ಇದ್ದರಾದರೂ ಅದ್ಯಾವುದಕ್ಕೂ ಆಡಳಿತ ಅವಧಿಯ ಕೊನೆ ಗಳಿಗೆವರೆಗೂ ಸ್ಪಂದಿಸಲು ಸಾಧ್ಯವಾಗದೆ ಇದ್ದ ಶಾಸಕರು ಆಧಿಕಾರದ ಕೊನೆ ದಿನವಾದ ಬುಧವಾರ ತರಾತುರಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಿಗದಿಪಡಿಸಿರುವುದು ಅಭಿವೃದ್ದಿಯ ಇಚ್ಛಾ ಶಕ್ತಿಯಲ್ಲ ಬದಲಾಗಿ ರಾಜಕೀಯ ಹಾಗೂ ಚುನಾವಣಾ ಗಿಮಿಕ್ ಎಂದು ಪುರವಾಸಿಗಳು ತೀವ್ರ ಅಸಮಾಧಾನದ ಮಾತುಗಳನ್ನಾಡುತ್ತಿರುವುದು ಕೇಳಿ ಬಂತು.
ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಕಾಮಗಾರಿ, ತ್ಯಾಜ್ಯ-ಕಸ ವಿಲೇವಾರಿ, ಅಂಬೇಡ್ಕರ್ ಭವನ, ಪಂಜೆ ಮಂಗೇಶರಾಯರ ಭವನ ಸಹಿತ ಹಲವು ಕಾರ್ಯಕ್ರಮಗಳು ಕಳೆದ ಐದು ವರ್ಷಗಳಿಂದ ಪರಿಹಾರ ಕಾಣದೆ ನೆನೆಗುದಿಗೆ ಬಿದ್ದಿದ್ದರೂ ಅದ್ಯಾವುದರ ಬಗ್ಗೆಯೂ ಯೋಚಿಸದೆ ಇರುವ ಶಾಸಕರು ಕೊನೆ ದಿನದಲ್ಲಾದರೂ ಯೋಜನೆಯೊಂದಕ್ಕೆ ಶಿಲಾನ್ಯಾಸ ನೆರವೇರಿಸಿದರು ಎಂದು ಪುರವಾಸಿಗಳು ವ್ಯಂಗ್ಯ ವಿಡಂಬನೆ ಮಾಡುತ್ತಿರುವುದು ಕಂಡು ಬಂತು. ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಸ್ವತಃ ಶಾಸಕರ ಪಕ್ಷಕ್ಕೆ ಸೇರಿದ ಚುನಾಯಿತ ಪ್ರತಿನಿಧಿಗಳೇ ಗಮನ ಸೆಳೆದರೂ ಕನಿಷ್ಠ ಅಧಿಕಾರಿಗಳ ಅಥವಾ ಚುನಾಯಿತ ಪ್ರತಿನಿಧಿಗಳನ್ನು ಜೊತೆ ಸೇರಿಸಿ ಸಭೆ ನಡೆಸುವ ಪ್ರಯತ್ನವನ್ನೂ ಶಾಸಕರು ನಡೆಸಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದೆ.
ತನ್ನ ಶಾಸಕತ್ವದ ಅಧಿಕಾರಾವಧಿಯಲ್ಲಿ ಅಧಿಕಾರದ ಕೊನೆಯ ದಿನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಭೇಟಿ ಹೊರತುಪಡಿಸಿದರೆ ಪುರಸಭಾ ಮೇಲ್ಭಾಗದ ಅಭಿಲೇಖಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸಿದ್ದರು. ಇದು ಶಾಸಕರ ಕ್ಷೇತ್ರದ ಹೃದಯ ಭಾಗದಲ್ಲಿರುವ ಪುರಸಭೆಗೆ ಭೇಟಿ ನೀಡುತ್ತಿರುವುದು ಎರಡೇ ಎರಡು ಬಾರಿ ಎಂಬ ಮಾತುಗಳೂ ಕೇಳಿ ಬಂತು. ಈ ಮಧ್ಯೆ ಕಳೆದ ನಾಲ್ಕೈದು ವರ್ಷಗಳ ಕಾಲ ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣವಾಗಿರುವ ಬಿ ಸಿ ರೋಡಿನಲ್ಲಿ “ಸುಂದರ ಬಿ ಸಿ ರೋಡು” ಪರಿಕಲ್ಪನೆಯಲ್ಲಿ ಕೆಲವೊಂದು ಕಾಮಗಾರಿಗಳನ್ನು ರಾಜ್ಯದ ಸಚಿವರುಗಳನ್ನು ತರಿಸಿ ಶಿಲಾನ್ಯಾಸ ನೆರವೇರಿಸಿ ಕೋಟಿಗಟ್ಟಲೆ ಅನುದಾನದ ಕಾಮಗಾರಿಯ ಬ್ಯಾನರ್ ಅಳವಡಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದು ಬಿಟ್ಟರೆ ಫ್ಲೈ ಓವರ್ ಅಡಿಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕನಿಷ್ಠ ಶೌಚಾಲಯವನ್ನೂ ಕೂಡಾ ಉದ್ಘಾಟಿಸುವ ಭಾಗ್ಯ ನಾಲ್ಕು ವರ್ಷಗಳಲ್ಲಿ ಒದಗಿ ಬಂದಿಲ್ಲ. ಚುನಾವಣಾ ವರ್ಷದಲ್ಲಿ ಈ ಕಾಮಗಾರಿಗೆ ಒಂದಷ್ಟು ಸ್ಪರ್ಶ ನೀಡಿರುವ ಶಾಸಕರು ಫ್ಲೈ ಓವರ್ ಪಿಲ್ಲರ್ ಗಳಿಗೆ ಬಣ್ಣ ಬಳಿದು ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾತ್ರ ಸಾಗಿದೆ ಹೊರತು ಸುಂದರ ಬಿ ಸಿ ರೋಡು ಪರಿಕಲ್ಪನೆ ಇನ್ನೂ ಹಾಗೇ ನೆನೆಗುದಿಗೆ ಬಿದ್ದಿದೆ ಎಂದು ಪುರವಾಸಿಗಳು ಹೇಳಿಕೊಳ್ಳುತ್ತಿದ್ದಾರೆ.
0 comments:
Post a Comment