ಮಂಗಳೂರು, ಮಾರ್ಚ್ 21, 2023 (ಕರಾವಳಿ ಟೈಮ್ಸ್) : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪಡೆ ಚುರುಕಾಗಿದ್ದು, ಕಾರ್ಯಚಟುವಟಿಕೆಗಳಿಗೆ ಬಿರುಸು ನೀಡುವ ಕೆಲಸವನ್ನು ಜಿಲ್ಲಾ ಎಸ್ಪಿ ಡಾ ವಿಕ್ರಂ ಅಮಾಟೆ ವರು ಮಾಡುತ್ತಿದ್ದು, ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಕೈಗೊಂಡಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಾರಾವಿ, ಚಾರ್ಮಾಡಿ, ಕೊಕ್ಕಡಗಳಲ್ಲಿರುವ ಚೆಕ್ ಪೊಸ್ಟ್‍ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಲ್ಲದೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣೆ ಕರ್ತವ್ಯಗಳ ಬಗ್ಗೆ ಸೂಕ್ತ ಸಲಹೆ-ಮಾರ್ಗದರ್ಶನ ನೀಡಿ ಚೆಕ್ ಪೊಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.
ನಕ್ಸಲ್ ಪೀಡಿತ ಹಾಗೂ ಸೂಕ್ಷ್ಮ ಮತಗಟ್ಟೆಗಳಾದ ನಾವೂರು, ತೋಟತ್ತಾಡಿ, ಉಜಿರೆ ಮತಗಟ್ಟೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಚುನಾವಣೆ ಸೂಕ್ಷ್ಮ ಪ್ರದೇಶಗಳಾದ ನಾವೂರು ಹಾಗೂ ಚಾರ್ಮಾಡಿ ಗ್ರಾಮಗಳಿಗೆ ಭೇಟಿ ನೀಡಿ ಸಿಟಿಜನ್ ಕಮಿಟಿ ಸಭೆ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ. ಸ್ಥಳೀಯ ರೌಡಿ ಶೀಟರ್ ಗಳಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ.
ಮುಂಬರುವ ಚುನಾವಣೆ ಪ್ರಯುಕ್ತ ವಿಶೇಷ ಕರ್ತವ್ಯ ನಿರ್ವಹಿಸಲು ಜಿಲ್ಲೆಗೆ ಆಗಮಿಸುವ ಅರೆ ಸೇನಾಪಡೆಗಳಿಗೆ ವಾಸ್ತವ್ಯ ಕಲ್ಪಿಸಲು ಗುರುತಿಸಲಾಗಿರುವ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿದ ಎಸ್ಪಿ ಡಾ ಅಮಾಟೆ ವಿಕ್ರಂ ಅವರು ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಸರ್ಕಲ್ ವ್ಯಾಪ್ತಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಸಂತ್ರಸ್ಥರ ಜೊತೆ ಸಂತ್ರಸ್ಥರ ಸಭೆ ನಡೆಸಿ, ಪ್ರಕರಣಗಳ ಪ್ರಸ್ತುತ ಹಂತದ ಬಗ್ಗೆ ಮಾಹಿತಿ ನೀಡಿ, ಸಮಸ್ಯೆಗಳ ಬಗ್ಗೆ ವಿಚಾರಿಸಿ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಬ್ರಿಫಿಂಗ್ ಸಭೆ ನಡೆಸಿ, ಸಿಬ್ಬಂದಿಗಳ ಕುಂದು ಕೊರತೆಗಳನ್ನು ವಿಚಾರಿಸಿ, ಮುಂಬರುವ ಚುನಾವಣೆಗೆ ಸಂಬಂದಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡಿ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
0 comments:
Post a Comment