ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-7 : ಪಿ ಜೆ ಸ್ಟಾರ್ ಚಾಂಪಿಯನ್, ಎಂ.ಎಸ್.ಎಂ. ಚಾಲೆಂಜರ್ ರನ್ನರ್
ಬಂಟ್ವಾಳ, ಮಾರ್ಚ್ 21, 2023 (ಕರಾವಳಿ ಟೈಮ್ಸ್) : ಯುವ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಕೆಟ್ ಪಟುಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾ ಮಟ್ಟದ ಕ್ರಿಕೆಟ್ ಕೂಟವನ್ನು ಅದ್ದೂರಿಯಾಗಿ ಸಂಘಟಿಸಲಾಗುವುದು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹೇಳಿದರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸೋಮವಾರ (ಮಾ 20) ಆಲಡ್ಕ ಮೈದಾನದಲ್ಲಿ ನಡೆದ ಏಳನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್ ಸೀಸನ್-7) ಅಂಡರ್ ಆರ್ಮ್ ಕ್ರಿಕೆಟ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ದಾಂತವಾದ ಜಾತಿ-ಮತ-ಧರ್ಮ-ಪಂಥ-ವರ್ಗಗಳನ್ನು ಮೀರಿದ ಸನ್ನಿವೇಶ ಕ್ರೀಡೆಯಲ್ಲಿ ಅಚ್ಚುಕಟ್ಟಾಗಿ ಪಾಲನೆಯಾಗುತ್ತಿದ್ದು, ಎಲ್ಲ ವರ್ಗದ ಯುವಕರು ಏಕಕಾಲದಲ್ಲಿ ಮೈದಾನದಲ್ಲಿ ಒಗ್ಗೂಡಿ ಸೌಹಾರ್ದತೆಯಿಂದ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಸೌಹಾರ್ದ ಭಾರತ ಕಟ್ಟುವಲ್ಲಿ ಸಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಕರ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಮಾಜದ ಶಾಂತಿ-ಸೌಹಾರ್ದತೆಯನ್ನು ಕೂಡ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕ್ರೀಡಾ ಕೂಟ ಆಯೋಜಿಸಿ ಯುವಕರನ್ನು ಸಂಘಟಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಕ್ರೀಡಾಕೂಟ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ದ ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಭೂಯಾ, ಬಂಗ್ಲೆಗುಡ್ಡೆ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪುತ್ತುಮೋನು, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಪ್ರಮುಖರಾದ ಯೂಸುಫ್ ಆಲಡ್ಕ, ಶಾಹುಲ್ ಎಸ್ ಎಚ್, ಅಶ್ರಫ್ ಕೆ ಸಿ ರೋಡು, ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್, ರವಳನಾಥ ನಾಯಕ್ ಮೆಲ್ಕಾರ್, ಅಬ್ದುಲ್ ಮಜೀದ್ ನಾಝ್, ಶಮೀರ್ ಜೈಭಾರತ್ ನಂದಾವರ, ಅಬ್ದುಲ್ ಜಬ್ಬಾರ್, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ವಿದ್ಯಾರ್ಥಿ ನಾಯಕ ಹಿಶಾಂ ಮೊದಲಾದವರು ಭಾಗವಹಿಸಿದ್ದರು.
ಸಂಘಟಕ ಶಫೀಕ್ ಯು ಸ್ವಾಗತಿಸಿ, ಅಶ್ರಫ್ ಯು ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಪಿ ಜೆ ಸ್ಟಾರ್ ತಂಡ ಚಾಂಪಿಯನ್
6 ತಂಡಗಳು ಭಾಗವಹಿಸಿದ್ದ ಲೀಗ್ ಮಾದರಿಯ ಕ್ರಿಕೆಟ್ ಕೂಟದಲ್ಲಿ ರಿಝ್ವಾನ್ ಪಿ ಜೆ ಮಾಲಕತ್ವದ, ಅಝ್ಮಲ್ ಪಿ ಜೆ ನಾಯಕತ್ವದ ಪಿ ಜೆ ಸ್ಟಾರ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಸತ್ತಾರ್ ಗುಡ್ಡೆಅಂಗಡಿ ಮಾಲಕತ್ವದ ಎಂ ಎಸ್ ಎಂ ಚಾಲೆಂಜರ್ಸ್ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಪಿ ಜೆ ಸ್ಟಾರ್ ತಂಡದ ಅಝ್ಮಲ್ ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರೆ, ಇರ್ಶಾದ್ ಇಚ್ಚ ಉತ್ತಮ ದಾಳಿಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎಂ ಎಸ್ ಎಂ ಚಾಲೆಂಜರ್ಸ್ ತಂಡದ ಅಶ್ಫಾಕ್ ನಂದಾವರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ನಾಝ್ ವಾರಿಯರ್ಸ್ ತಂಡದ ಅಶ್ಫಾಕ್ ಉತ್ತಮ ದಾಂಡುಗಾರ ಪ್ರಶಸ್ತಿ ಪಡೆದುಕೊಂಡರು.
ರಫೀಕ್ ಮೆಜೆಸ್ಟಿಕ್, ನಿಝಾಂ ನಂದಾವರ ಹಾಗೂ ನಿಸಾರ್ ಅಕ್ಕರಂಗಡಿ ತೀರ್ಪುಗಾರರಾಗಿ ಹಾಗೂ ಸಲಾಲ್ ಗೂಡಿನಬಳಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
ಕೂಟದಲ್ಲಿ ಶರೀಫ್ ಭೂಯಾ ಮಾಲಕತ್ವದ ಬೀಯಿಂಗ್ ಭೂಯಾ, ತನ್ಸೀರ್ ಮಾಲಕತ್ವದ ಪಿ ಎಂ ಬ್ರದರ್ಸ್, ರಿಯಾಝ್ ಮಾಲಕತ್ವದ ಪ್ಲೇ ಬಾಯ್ಸ್ ಹಾಗೂ ಝುಬೈರ್ ಮೋನು ಮಾಲಕತ್ವದ ನಾಝ್ ವಾರಿಯರ್ಸ್ ತಂಡಗಳು ಭಾಗವಹಿಸಿತ್ತು.
0 comments:
Post a Comment