ಬಂಟ್ವಾಳ, ಫೆಬ್ರವರಿ 22, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬೊಂಡಾಲ ವಾರ್ಡಿನ ಸೇನರಬೈಲು ಎಂಬಲ್ಲಿ ಖಾಸಗಿ ವ್ಯಕ್ತಿಗಳು ಹೊಸದಾಗಿ ಮನೆಕಟ್ಟುವ ಸಂದರ್ಭ ಅನಾರೋಗ್ಯಪೀಡಿತ ಮಹಿಳೆಯ ಮನೆಯ ದಾರಿಯನ್ನು ಮುಚ್ಚಿ ತೊಂದರೆ ನೀಡುತ್ತಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸರಿಗೆ ಹಾಗೂ ಪುರಸಭಾ ಮುಖ್ಯಾಧಿಕಾರಿಗೆ ದೂರು ನೀಡಿ ತಿಂಗಳಾದರೂ ಕ್ರಮ ಕೈಗೊಳ್ಳದ ಬಗ್ಗೆ ಮಹಿಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೊಂಡಾಲ-ಸೇನರಬೈಲು ನಿವಾಸಿ ಬಾಳಪ್ಪ ದೇವಾಡಿಗ ಅವರ ಪುತ್ರಿ ಮೋಹಿನಿ ಎಂಬವರು ಈ ಬಗ್ಗೆ ದೂರು ನೀಡಿದ್ದು, ಕಳೆದ 10 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಈ ವಿಳಾಸದಲ್ಲಿರುವ ಮನೆಯಲ್ಲಿ ವಾಸಿಕೊಂಡು ಬರುತ್ತಿದ್ದು, ಅನಾರೋಗ್ಯ ಪೀಡಿತಳಾಗಿದ್ದು, ಕೈ-ಕಾಲು ನೋವು ಅನುಭವಿಸುತ್ತಿರುವುದರಿಂದ ನಿತ್ಯ ಔಷಧಿಯಿಂದಲೇ ಜೀವಿಸುತ್ತಿರುವುದಾಗಿರುತ್ತದೆ. ಆದರೆ ಇತ್ತೀಚೆಗೆ ಸ್ಥಳೀಯರಾದ ಅಶೋಕ ಎಂಬವರ ಪತ್ನಿ ಪ್ರೇಮಾ ಎಂಬವರು ಹೊಸ ಮನೆ ನಿರ್ಮಿಸುತ್ತಿದ್ದು, ಈ ಸಂದರ್ಭ ಮೋಹಿನಿ ಅವರ ಮನೆಗೆ ಹೋಗಿ ಬರುವ ರಸ್ತೆಯನ್ನು ಕೆಡವಿ ಹಾಕಲಾಗಿದೆ ಎಂದು ದೂರಲಾಗಿದೆ.
ಕೆಡವಿ ಹಾಕಿರುವ ರಸ್ತೆಯನ್ನು ತಕ್ಷಣ ಸರಿಪಡಿಸಿ ಕೊಡುವುದಾಗಿ ಈ ಹಿಂದೆ ಭರವಸೆ ನೀಡಿದ್ದರೂ ರಸ್ತೆಯನ್ನು ದುರಸ್ತಿಪಡಿಸಿಕೊಡದೆ ಇರುವುದರಿಂದ ಕೈ-ಕಾಲು ನೋವು ಹಾಗೂ ಅನಾರೋಗ್ಯ ಪೀಡಿತಳಾದ ನನಗೆ ಹತ್ತಲು, ಇಳಿಯಲು ಸಾಧ್ಯವಾಗುತ್ತಿಲ್ಲ ಎಂದು ಮೋಹಿನಿ ಅಧಿಕಾರಿಗಳಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರಿಗೂ ಮನವರಿಕೆ ಮಾಡಿಕೊಡಲಾಗಿದೆ. ಪೊಲೀಸರೂ ಕೂಡಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆಯೇ ಹೊರತು ಯಾವುದೇ ಕ್ರಮ ಆಗಿರುವುದಿಲ್ಲ ಎಂದು ಮೋಹಿನಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಅನಾರೋಗ್ಯ ಪೀಡಿತಳಾದ ನನಗೆ ನ್ಯಾಯ ದೊರಕಿಸಿಕೊಟ್ಟು ನೆಮ್ಮದಿಯಿಂದ ಬದುಕಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
0 comments:
Post a Comment