ಬಂಟ್ವಾಳ, ಫೆಬ್ರವರಿ 20, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಭೂ ದಾಖಲೆಗಳ ಕಛೇರಿಯಲ್ಲಿ ಸಹಾಯಕ ನಿರ್ದೇಶಕರು ಇಲ್ಲದೆ ತಿಂಗಳಿನಿಂದ ಸಾರ್ವಜನಿಕ ಕೆಲಸದ ಕಡತಗಳು ವಿಲೇವಾರಿಯಾಗದೆ ಬಾಕಿಯಾಗಿ ಸಾರ್ಜನಿಕರು ಪರದಾಟ ನಡೆಸುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಮೈಸೂರು ವಿಭಾಗ ಭೂ ದಾಖಲೆಗಳ ಜಂಟಿ ನಿರ್ದೇಶಕ ಪ್ರಸಾದ್ ವಿ ಕುಲಕರ್ಣಿ ಅವರು ಸೋಮವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದಲ್ಲಿರುವ ಸರ್ವೆ ಇಲಾಖಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಸಾರ್ವಜನಿಕರು ಜೆಡಿ ಅವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು. ಈ ಬಗ್ಗೆ ಪ್ರತಿಕ್ರಯಿಸಿದ ಅವರು ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪೂರ್ಣಕಾಲಿಕ ಎ ಡಿ ಎಲ್ ಆರ್ ನೇಮಕ ಕಷ್ಟಸಾಧ್ಯವಾಗಿದ್ದು, ತಾತ್ಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ಎ ಡಿ ಎಲ್ ಆರ್ ಅವರಿಗೆ ಬಂಟ್ವಾಳದ ಹೆಚ್ಚುವರಿ ಹೊಣೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಅವರನ್ನು ಬಂಟ್ವಾಳಕ್ಕೆ ನಿಯೋಜಿಸಿ ಇಲ್ಲಿನ ಕಚೇರಿಯ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಟ್ವಾಳ ತಾಲೂಕಿನ ಎ ಡಿ ಎಲ್ ಆರ್ ಗೆ ಬಂಟ್ವಾಳ ಸಹಿತ ಉಳ್ಳಾಲ ಹಾಗೂ ಸುಳ್ಯ ತಾಲೂಕಿನ ಜವಾಬ್ದಾರಿಯೂ ಇತ್ತು. ಪ್ರಸ್ತುತ ಇಲ್ಲಿನ ಎ ಡಿ ಎಲ್ ಆರ್ ರಜೆಯಲ್ಲಿರುವುದರಿಂದ ಈ ಎಲ್ಲಾ ತಾಲೂಕುಗಳ ಜನರ ಭೂ ಸಂಬಂಧಿ ಕಡತಗಳೂ ಸದ್ಯ ವಿಲೇವಾರಿ ಇಲ್ಲದೆ ಬಾಕಿಯಾಗಿದೆ.
ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಬಂಟ್ವಾಳ ಎ ಡಿ ಎಲ್ ಆರ್ ರಜೆಯಲ್ಲಿದ್ದಾರೆ ಎನ್ನಲಾಗುತ್ತಿದ್ದು, ಮಂಗಳೂರು ಎ ಡಿ ಎಲ್ ಆರ್ ಅವರಿಗೆ ಮೂಡಬಿದ್ರೆ ಹಾಗೂ ಮುಲ್ಕಿ, ಪುತ್ತೂರು ಎ ಡಿ ಎಲ್ ಆರ್ ಅವರಿಗೆ ಕಡಬ ಹೆಚ್ಚುವರಿ ಜವಾಬ್ದಾರಿ ಇರುತ್ತದೆ. ಬೆಳ್ತಂಗಡಿ ತಾಲೂಕು ಎ ಡಿ ಎಲ್ ಆರ್ ಅಧಿಕಾರಿಗೆ ಯಾವುದೇ ಹೆಚ್ಚುವರಿ ಹೊಣೆಗಾರಿಕೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಅವರಿಗೆ ಬಂಟ್ವಾಳ ಹಾಗೂ ಉಳ್ಳಾಲದ ಹೆಚ್ಚುವರಿ ಹೊಣೆ ನೀಡುವ ನಿಟ್ಟಿನಲ್ಲಿ ಜಂಟಿ ನಿರ್ದೇಶಕರು ತೀರ್ಮಾನ ಕೈಗೊಂಡಿದ್ದಾರೆ.
0 comments:
Post a Comment