ಬಂಟ್ವಾಳ, ಫೆಬ್ರವರಿ 24, 2023 (ಕರಾವಳಿ ಟೈಮ್ಸ್) : 2019ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಟ್ವಾಳ ತಾಲೂಕು, ಉಳಿ ಗ್ರಾಮದ ಪುಲ್ಲೇರಿ ನಿವಾಸಿ ದಿವಂಗತ ಸುಂದರ ಪೂಜಾರಿ ಅವರ ಪುತ್ರ ಸತೀಶ್ ಪೂಜಾರಿ (35) ಎಂಬಾತನ ಮೇಲಿನ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್ಟಿ-ಎಸ್ಸಿ 1, (ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶರು ಗುರುವಾರ (ಫೆ 23) ನಮೂದಿಸಿದ ಕಾಯ್ದೆ, ಕಲಂಗಳ ಅಡಿಯಲ್ಲಿ 10 ವರ್ಷ ಜೈಲುವಾಸ ಹಾಗೂ 10 ಸಾವಿರ ರೂಪಾಯಿ ದಂಡ, ಜೀವಾವದಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ಮತ್ತು 6 ತಿಂಗಳ ಜೈಲುವಾಸ ಹಾಗೂ 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
2019 ರ ಫೆಬ್ರವರಿ 11 ರಂದು ಮಧ್ಯಾಹ್ನ 1 ಗಂಟೆಗೆ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಅತ್ಯಾಚಾರ ಮಾಡಿದ ಬಗ್ಗೆ 2019 ಫೆ 22 ರಂದು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2019 ಕಲಂ 448, 376, ಐಪಿಸಿ ಮತ್ತು ಕಲಂ 4 ಪೊಕ್ಸೋ ಕಾಯ್ದೆ 2012, ಕಲಂ:3(1)ಡಬ್ಲ್ಯು(1), 3(2)(ವಿಎ) ಎಸ್/ ಎಸ್ ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರು ಆರೋಪಿ ಸತೀಶ್ ಪೂಜಾರಿಯನ್ನು ದಸ್ತಗಿರಿ ಮಾಡಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಂಪೂರ್ಣ ತನಿಖೆ ನಡೆಸಿ, ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯವಾಗಿ ಆರೋಪಿತನ ವಿರುದ್ದ ಆರೋಪ ಸಾಬೀತಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಬಂಟ್ವಾಳ ಉಪವಿಭಾಗದ ಅಂದಿನ ಎಎಸ್ಪಿ ಸೈದುಲ್ ಅಡಾವತ್ ಸಂಪೂರ್ಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪೊಲೀಸ್ ಉಪವಿಭಾಗಧಿಕಾರಿ ಕಛೇರಿಯ ಹೆಡ್ ಕಾನ್ಸ್ಟೇಬಲ್ ಸೀತರಾಮ್ ಅವರು ತನಿಖಾ ಸಹಾಯಕರಾಗಿ ಕಾರ್ಯನಿರ್ವರ್ಹಿಸಿರುತ್ತಾರೆ ಹಾಗೂ ಕೋರ್ಟ್ ಮೋನಿಟರಿಂಗ್ ಸೆಲ್ ಕರ್ತವ್ಯವನ್ನು ಮಹಿಳಾ ಕಾನ್ಸ್ಟೇಬಲ್ ಸಫಿನಾ ಅವರು ನಿರ್ವಹಿಸಿರುತ್ತಾರೆ ಮತ್ತು ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಮತಿ ಸಹನಾ ದೇವಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
0 comments:
Post a Comment