ಬಂಟ್ವಾಳ, ಫೆಬ್ರವರಿ 18, 2023 (ಕರಾವಳಿ ಟೈಮ್ಸ್) : ಡೈನಿಂಗ್ ಟೇಬಲ್ ಸಾಗಾಟಕ್ಕೆ ವಾಹನ ಮಾಡಿಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಓರ್ವನಿಗೆ ಮತ್ತೋರ್ವ ಕತ್ತರಿಯಿಂದ ತಿವಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪ ಶನಿವಾರ ಮಧ್ಯಾಹ್ನ ವೇಳೆ ನಡೆದಿದೆ.
ಪಾಣೆಮಂಗಳೂರು ಸಮೀಪದ ಜೈನರಪೇಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಸುಲೇಮಾನ್ ಎಂಬಾತನೇ ಕತ್ತರಿಯಿಂದ ಹಲ್ಲೆಗೊಳಗಾದ ಯುವಕ. ಆರೋಪಿಯನ್ನು ಸ್ಥಳೀಯ ನಿವಾಸಿ ನಿಸಾರ್ ಎಂದು ಹೆಸರಿಸಲಾಗಿದೆ.
ಪಾಣೆಮಂಗಳೂರಲ್ಲಿ ಡೈನಿಂಗ್ ಟೇಬಲ್ ಸಾಗಾಟ ಮಾಡಲು ವಾಹನ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರಿಚಯಸ್ಥರಾದ ಇವರಿಬ್ಬರ ನಡುವೆ ಜಗಳವಾಗಿ, ಬಳಿಕ ನಿಸಾರ್ ಕತ್ತರಿಯಿಂದ ಸುಲೇಮಾನ್ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ಸುಲೇಮಾನ್ ಬಲ ಭುಜಕ್ಕೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment