ಬಂಟ್ವಾಳ, ಫೆಬ್ರವರಿ 03, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಮುಂದಾಳುತ್ವದ ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 2ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳ ಮಾರ್ಚ್ 4 ರಂದು ನಡೆಯಲಿದೆ.
ಕಾವಳಕಟ್ಟೆಯಲ್ಲಿ 10 ವರ್ಷ ಯಶಸ್ವಿಯಾಗಿ ರಮಾನಾಥ ರೈ ನೇತೃತ್ವದಲ್ಲಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್ ಅಧ್ಯಕ್ಷತೆಯಲ್ಲಿ ಮೂಡೂರು-ಮೂಡೂರು ಜೋಡುಕರೆ ಕಂಬಳ ನಡೆದು ಬಳಿಕ ಸ್ಥಳಾವಕಾಶದ ಅನಾನುಕೂಲತೆ ಕಾರಣಕ್ಕಾಗಿ ಕೆಲ ವರ್ಷ ನಿಂತು ಹೋಗಿತ್ತು. ಕಳೆದ ವರ್ಷದಿಂದ ಮತ್ತೆ ಮೂಡೂರು-ಪಡೂರು ಕಂಬಳಕ್ಕೆ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಗಿತ್ತು. ಕಳೆದ ವರ್ಷ ಬಹಳಷ್ಟು ಅದ್ದೂರಿಯಾಗಿ ವಿಶಿಷ್ಟ ರೀತಿಯಲ್ಲಿ ಕಂಬಳ ಯಶಸ್ವಿಗೊಂಡಿತ್ತು. ಇದೀಗ ಎರಡನೇ ವರ್ಷದ ಕಂಬಳ ಮಾರ್ಚ 4 ರಂದು ನಡೆಯಲಿದೆ.
ಈ ಹಿನ್ನಲೆಯಲ್ಲಿ ಕಂಬಳ ಕರೆ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳ ಸಿದ್ದತೆ ಈಗಿನಿಂದಲೇ ಭರದಿಂದ ಸಾಗುತ್ತಿದೆ. ರಮಾನಾಥ ರೈ ಸಹಿತ ಕೆಪಿಸಿಸಿ ಸದಸ್ಯರುಗಳಧ ಪಿಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಪದ್ಮಶೇಖರ ಜೈನ್, ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಮೊದಲಾದ ಪ್ರಮುಖರು ಸಿದ್ದತೆ ಮುಂದಾಳುತ್ವ ವಹಿಸಿಕೊಂಡಿದ್ದಾರೆ.
0 comments:
Post a Comment