ಬಂಟ್ವಾಳ, ಫೆಬ್ರವರಿ 13, 2023 (ಕರಾವಳಿ ಟೈಮ್ಸ್) : ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಕೂಡಲೇ ಅರ್ಜಿ ಆಹ್ವಾನಿಸುವಂತೆ ಆಗ್ರಹಿಸಿ ಬಂಟ್ವಾಳ ವೃತ್ತ ಕಾರ್ಮಿಕ ನಿರೀಕ್ಷಕರ ಮುಖಾಂತರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ 2022-23ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಈವರೆಗೂ ಮಂಡಳಿಯಿಂದ ಅರ್ಜಿ ಆಹ್ವಾನಿಸಲಾಗಿಲ್ಲ. ಈಗಾಗಲೇ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದು, ಇನ್ನೂ ಕೂಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸದೇ ಇರುವುದರಿಂದ ಇದನ್ನೇ ನಂಬಿರುವ ಬಡ ಕಾರ್ಮಿಕರ ಮಕ್ಕಳಿಗೆ ತೊಂದರೆಯಾಗಿದೆ. ಆದುದರಿಂದ ನೋಂದಾಯಿತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ತಕ್ಷಣ ಅರ್ಜಿ ಆಹ್ವಾನಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡಿದ ನಿಯೋಗದಲ್ಲಿ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ರಾಜ ಚಂಡ್ತಿಮಾರ್, ಇಬ್ರಾಹಿಂ ಮೈಂದಾಲ, ಸೇಸಪ್ಪ ಕೊಪ್ಪಲ, ಜಯಶಂಕರ ಪ್ರಭು, ರವಿ ನೈನಾಡು ಮೊದಲಾದವರಿದ್ದರು.
0 comments:
Post a Comment