ಬಂಟ್ವಾಳ, ಫೆಬ್ರವರಿ 22, 2023 (ಕರಾವಳಿ ಟೈಮ್ಸ್) : ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ ರಾಜ್ಯ ಸರಕಾರದ ಕ್ರಮ ಅಭಿನಂದನೀಯ. ಆದರೆ ಇದೇ ಬಜೆಟ್ ಅಧಿವೇಶನದಲ್ಲಿ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ಮಂಜೂರಾತಿ ಮಾಡಬೇಕು ಹಾಗೂ ಶೀಘ್ರದಲ್ಲೇ ನಿಗಮಕ್ಕೆ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಸಮುದಾಯಕ್ಕಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳನ್ನು ನಿರ್ದೇಶಕರನ್ನಾಗಿ ನೇಮಿಸಿ ಪೂರ್ಣ ಪ್ರಮಾಣದಲ್ಲಿ ನಿಗಮ ಕಾರ್ಯರೂಪಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಪಾದಾಯಾತ್ರೆ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಆಗ್ರಹಿಸಿದರು.
ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಲ್ಲವ ಸಮುದಾಯ ಈಗಾಗಲೇ ಸರಕಾರದ ಮುಂದೆ 13 ಬೇಡಿಕೆಗಳನ್ನು ಮಂಡಿಸಿ, ಸಮುದಾಯದ ಶ್ರೀ ಪ್ರಣಾವನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಸರಕಾರದ ಗಮನ ಸೆಳೆದಿತ್ತು. ಸಮುದಾಯದ ಮಂದಿಯ ಪಾದಯಾತ್ರೆಯಿಂದ ಎಚ್ಚೆತ್ತ ಸರಕಾರ ಇದೀಗ ಬಿಲ್ಲವರ ಅಭಿವೃದ್ದಿ ನಿಗಮ ಘೋಷಣೆ ಮಾಡಿದೆ. ಇನ್ನುಳಿದ ಬೇಡಿಕೆಗಳಿಗೂ ಮನ್ನಣೆ ನೀಡಲಾಗುವುದು ಎಂಬ ಭರವಸೆಯನ್ನು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿಯೂ ಎಲ್ಲಾ ರಾಜಕೀಯ ಪಕ್ಷಗಳೂ ಬಿಲ್ಲವ ಸಮುದಾಯಕ್ಕೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಅಧಿಕ ಸಂಖ್ಯೆಯಲ್ಲಿರುವ ಕಡೆ ಕನಿಷ್ಠ ಮೂರು ಶಾಸಕ ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಬಲ್ಲವರ ಸಮುದಾಯವನ್ನು ಸರಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ರಾಜ್ಯಾದ್ಯಂತ ನೀರಾ ಮತ್ತು ಶೇಂದಿ ತೆಗೆಯಲು ಹಾಗೂ ಮಾರಾಟ ಮಾಡಲು ಅವಕಾಶ ನೀಡಬೇಕು. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಕೆಲವು ಕಾನೂನು ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು ಎಂದವರು ಆಗ್ರಹಿಸಿದರು.
ಬಿಲ್ಲವ ಸಮುದಾಯದ ಉನ್ನತಿಗಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ವತಿಯಿಂದ ಗ್ರಾಮ ಸಮಿತಿಗಳನ್ನು ರಚಿಸಲಿದ್ದು, ಮಾ. 12 ರಂದು ಕುದ್ರೋಳಿ ಗೋಕರ್ಣ ಕ್ಷೇತ್ರದ ಸಭಾಂಗಣದಲ್ಲಿ ಬಿಲ್ಲವ ನಾಯಕರ ವಿಶೇಷ ಸಭೆ ಕರೆಯಲಾಗಿದೆ ಎಂದು ಜೀತೇಂದ್ರ ಸುವರ್ಣ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಮೂರ್ತೆದಾರ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಮುಲ್ಕಿ ಬಿಲ್ಲವ ಮಹಾಮಂಡಲದ ವಕ್ತಾರ ಬೇಬಿ ಕುಂದರ್, ಪಾದಯಾತ್ರೆ ಸಮಿತಿಯ ಬಂಟ್ವಾಳ ತಾಲೂಕು ಸಂಚಾಲಕ ಪ್ರೇಮನಾಥ, ಎಸ್ ಎನ್ ಜಿ ವಿ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ನವೀನ್ ಕೋಟ್ಯಾನ್, ಉಪಾಧ್ಯಕ್ಷ ಸುಂದರ ಪೂಜಾರಿ, ಪಾದಯಾತ್ರೆ ಸಮಿತಿ ಜಿಲ್ಲಾ ಸಹ ಕಾರ್ಯದರ್ಶಿ ಸತೀಶ್ ಪೂಜಾರಿ ಬಾಯಿಲ ಮೊದಲಾದವರು ಜೊತೆಗಿದ್ದರು.
0 comments:
Post a Comment