ಬಂಟ್ವಾಳ, ಫೆಬ್ರವರಿ 08, 2023 (ಕರಾವಳಿ ಟೈಮ್ಸ್) : ತಾಲೂಕಿನ ಅಲ್ಲಿಪಾದೆಯಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕೃತಗೊಂಡ ಚರ್ಚ್ ಕಟ್ಟಡ ಹಾಗೂ ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಚನ ಸಂಭ್ರಮ ಕಾರ್ಯಕ್ರಮಗಳು ಪೆಬ್ರವರಿ 12 ರಿಂದ ಆರಂಭವಾಗಲಿದೆ.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ನವೀಕೃತ ಕಟ್ಟಡವನ್ನು ಉದ್ಘಾಟಿಸುವರು. ಕ್ಯಾಲಿಕೆಟ್ ಧರ್ಮ ಪ್ರಾಂತ್ಯದ ವಿಗಾರ್ ಜನರಲ್ ಡಾ. ಜೆನ್ಸನ್ ಪುತನ್ ವೀಟಿಲ್ ಆಶೀರ್ವಚನಗೈಯುವರು. ಧರ್ಮಗುರುಗಳಾದ ವಲೇರಿಯನ್ ಡಿ ಸೋಜ, ಅನ್ನಿಸ್ ಕಲ್ಲರಕ್ಕಲ್, ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಲ್ಲಿಪಾದೆ ಧರ್ಮಕ್ಷೇತ್ರ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿ ಪಥದಲ್ಲಿ ಮುಂದುವರಿದಿದ್ದು, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಧರ್ಮ ಕ್ಷೇತ್ರದಲ್ಲಿ 200 ಕ್ರೈಸ್ತ ಕುಟುಂಬಗಳಿದ್ದು, ಭಕ್ತ ಜನರ ಏರಿಕೆಯಾದಂತೆ ದೇವಾಲಯದಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಧರ್ಮ ಗುರುಗಳ ವಾಸದ ಮನೆಯ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸರಕಾರ ಹಾಗೂ ಸಹೃದಯರ ಸಹಕಾರದಿಂದ ಸುಸಜ್ಜಿತ ನವೀಕೃತ ಕಟ್ಟಡದ ನಿರ್ಮಾಣ ಮಾಡಲಾಗಿದೆ.
ಫೆ. 12 ರಂದು ಆದಿತ್ಯವಾರ ಸಂಜೆ ಮೊಡಂಕಾಪು ಚರ್ಚ್ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಫೆ 13 ರಂದು ನವೀಕೃತಗೊಂಡ ಚರ್ಚ್ ಕಟ್ಟಡ ಹಾಗೂ ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಫೆ. 14 ರಂದು ಮಂಗಳವಾರ ಧಾರ್ಮಿಕರ ದಿನ, ಸರ್ವಧರ್ಮ ಸಹಮಿಲನ, ಬಳಿಕ ಲ ದೇವದಾಸ್ ಕಾಪಿಕಾಡ್ ಅವರ ನಮಸ್ಕಾರ ಮಾಷ್ಟ್ರೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಫೆ. 15 ರಂದು ಸಂತ ಅಂತೋನಿಯವರ ವಾರ್ಷಿಕ ಹಬ್ಬ, ಫೆ. 16ರಂದು ದಾನಿಗಳ ಹಾಗೂ ಕಾರ್ಮಿಕರ ದಿನ, ಫೆ. 17 ರಂದು ಮಕ್ಕಳು ಹಾಗೂ ಯುವ ಜನರ ದಿನ, ಫೆ. 18 ರಂದು ಕ್ರೈಸ್ತ ಕುಟುಂಬಗಳ ದಿನ, ಫೆ. 19ರಂದು ಸಾಮೂಹಿಕ ಪ್ರಥಮ ಪರಮ ಪ್ರಸಾದ ದಿನ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ನವೀಕೃತ ಇಗರ್ಜಿಯು ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ನೆಲಮಟ್ಟದಿಂದ ಮೇಲಿನ ಶಿಲುಬೆಯವರೆಗೆ 85 ಅಡಿ ಎತ್ತರವಿದೆ. 10 ಆಡಿ ಎತ್ತರವಿರುವ ಸಂತ ಅಂತೋನಿಯವರ ಅನನ್ಯ ಪ್ರತಿಮೆ ಇದೆ.
ಇಗರ್ಜಿಯಲ್ಲಿ ಭಾರತದಲ್ಲೇ ಸೇವೆ ಸಲ್ಲಿಸಿದ ಹಾಗೂ ಬೇಟಿ ನೀಡಿದ ಸಂತರ ಪ್ರತಿಮೆಗಳಿವೆ. ವರ್ಣರಂಜಿತ ಗಾಜಿನಲ್ಲಿ ಮೇರಿಮಾತೆಯ ಜಪಸರದ 20 ರಹಸ್ಯಗಳಿವೆ. ಇಗರ್ಜಿಯ ಒಳಗಡೆ 2 ಪಾರ್ಶದ ಗ್ಯಾಲರಿಗಳಲ್ಲಿ ಪ್ರಾಚೀನ ಶೈಲಿಯ ಮರದ ಕೆತ್ತನೆ (ಕಡಚಲ್) ಗಳ ಮಧ್ಯದಲ್ಲಿ ಸಂತ ಅಂತೋನಿಯವರ 13 ಪವಾಡಗಳ ದೃಶ್ಯಗಳಿವೆ. ಗ್ಯಾಲರಿಗಳ ಎರಡೂ ಪಾರ್ಶ್ವಗಳಲ್ಲಿ ವೃತ್ತಾಕಾರದಲ್ಲಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಕ್ರಿಸ್ತನ ಶಿಲುಬೆ ಹಾದಿಯ 14 ದೃಶ್ಯಗಳಿವೆ. ವಿವಿಧ ಸಂಸ್ಕಾರಗಳನ್ನು ಬಿಂಬಿಸುವಂತೆ ಕೆತ್ತಲ್ಪಟ್ಟ ಇಗರ್ಜಿಯ ಮುಂಭಾಗದ ಪ್ರವೇಶ ಬಾಗಿಲು ಇದೆ. ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿದ ಸುಂದರ ದೇವರ ಪೀಠ (ಬಲಿಪೂಜೆ ಪೀಠ) ಇದ್ದು, ಇಗರ್ಜಿಯ ಒಳಗಡೆ ಒಂದೇ ಬೃಹತ್ ಫ್ಯಾನ್ ಇದೆ. ಇಗರ್ಜಿಯ ರಸ್ತೆಯ ಇಕ್ಕೆಲಗಳಲ್ಲಿ ಸುಂದರ ಅಲಂಕರಿತ ಗಿಡಗಳು ಮತ್ತು ಸೌರದೀಪಗಳಿವೆ. ಇಗರ್ಜಿಯ ವಠಾರದಲ್ಲಿ ಹೈಮಾಸ್ಟ್ ದೀಪ ಹಾಗೂ ಸುತ್ತಲೂ ಆವರಣಕ್ಕೆ ಸೌರದೀಪಗಳನ್ನು ಅಳವಡಿಸಲಾಗಿದೆ.
0 comments:
Post a Comment