ಬೆಳ್ತಂಗಡಿ, ಜನವರಿ 04, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿ ಕಾರ್ಯಾಚರಣೆ ನಡೆಸಿದ ವೇಣೂರು ಠಾಣಾ ಪೊಲೀಸರು ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಓಮ್ನಿ ಕಾರು ಹಾಗೂ ಅದಕ್ಕೆ ಬೆಂಗಾವಲಾಗಿ ಸಾಗುತ್ತಿದ್ದ ಬೈಕನ್ನು ತಡೆದು ಅಕ್ರಮ ಜಾನುವಾರು ಸಾಗಾಟ ಬೇಧಿಸಿ ಜಾನುವಾರು, ಸೊತ್ತು ಸಹಿತ ಐದು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು, ಕರಾಯ ಗ್ರಾಮದ ಜನತಾ ಕಾಲೊನಿ ನಿವಾಸಿ ಕಾಸಿಂ ಅವರ ಪುತ್ರ ತೌಸೀಫ್ (32), ರಫೀಕ್ ಅವರ ಪುತ್ರ ಇರ್ಫಾನ್ (25), ಕಾಸಿಂ ಅವರ ಪುತ್ರ ಅನಾಸ್ (23) ಪುತ್ತಿಲ ಗ್ರಾಮದ ಮಣಿಲ ನಿವಾಸಿ ಇಬ್ರಾಹಿಂ ಅವರ ಪುತ್ರ ಇಸ್ಮಾನ್ (55), ಮೂಲತಃ ವಳಾಲು ಗ್ರಾಮದ ಬಜತ್ತೂರು ನಿವಾಸಿ, ಪ್ರಸ್ತುತ ಪುತ್ತೂರು ತಾಲೂಕು, ನೆಕ್ಕಿಲಾಡಿ, ಗ್ರೀನ್ ಲ್ಯಾಂಡ್ ನಿವಾಸಿ ಇಕ್ಬಾಲ್ (34) ಎಂದು ಹೆಸರಿಸಲಾಗಿದೆ.
ಬುಧವಾರ (ಜ 4) ಬೆಳಗ್ಗಿನ ಜಾವ ವೇಣೂರು ಪೊಲೀಸರು ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮ ಗೋಸಾಗಾಟದ ಓಮ್ನಿ ಕಾರಿಗೆ ಬೆಂಗಾವಲಾಗಿ ಬರುತ್ತಿರುವ ಬಗ್ಗೆ ಸವಾರರು ನೀಡಿದ ಮಾಹಿತಿಯಂತೆ ಮಾರುತಿ ಒಮ್ನಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ ಗೋ ಸಾಗಾಟ ಪ್ರಕರಣ ಪತ್ತೆ ಹಚ್ಚಿದ್ದಾರೆ.
ಕಾರಿನಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿದ್ದ 5 ಜಾನುವಾರುಗಳನ್ನು ಹಾಗೂ ಸಾಗಾಟ ಮಾಡುತ್ತಿದ್ದ ಓಮ್ನಿ ಕಾರು, ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1.90 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವೇಣೂರು ಠಾಣಾ ಅಪರಾಧ ಕ್ರಮಾಂಕ 01/2023 ಕಲಂ 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment