ಮಂಗಳೂರು, ಜನವರಿ 07, 2023 (ಕರಾವಳಿ ಟೈಮ್ಸ್) : ಇತ್ತೀಚೆಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಹರೇಕಳದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಭಾಷಣ ಮಾಡಿ ತೆರಳಿದ್ದು, ಅಲ್ಪಸಂಖ್ಯಾತರ ನ್ಯಾಯಕ್ಕಾಗಿ ಧ್ವನಿಯೆತ್ತುವವರು ಎಂಬ ಫೋಸ್ ನೀಡುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಇತ್ತೀಚೆಗೆ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಕೋಮು ಆಧಾರಿತ ಘಟನೆಗಳಗೆ ಬಲಿಯಾದ ಯುವಕರ ಮನೆಗೆ ಭೇಟಿ ನೀಡದ ಬಗ್ಗೆ ನೆಟ್ಟಿಗರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ನಾಯಕ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ತನ್ನ ಕ್ಷೇತ್ರಕ್ಕೆ ಬಂದ ಮಾಜಿ ಮುಖ್ಯಮಂತ್ರಿಯನ್ನು ಕನಿಷ್ಠ ಪಕ್ಷ ಮೃತ ಯುವಕರ ಕುಟುಂಬಕ್ಕೆ ಸಾಂತ್ವನ ಹೇಳಲು ಕರೆದುಕೊಂಡು ಹೋಗಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಕೋಮು ಆಧಾರಿತ ಘಟನೆಗಳಲ್ಲಿ ಬಲಿಯಾದ ಅಮಾಯಕ ಮುಸ್ಲಿಂ ಯುವಕರಾದ ಜಲೀಲ್, ಫಾಝಿಲ್, ಮಸೂದ್ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದಿಂದ ಪರಿಹಾರ ಕೊಡುವುದು ಪಕ್ಕಕ್ಕಿರಲಿ, ಜಿಲ್ಲೆಗೆ ಭೇಟಿ ನೀಡಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಕನಿಷ್ಠ ಸಾಂತ್ವನ ಕೂಡ ಹೇಳಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶೇಷತೆ ಎಂದರೆ ಸಿದ್ದರಾಮಯ್ಯ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದು ಕರಾವಳಿಯ ಬಿಲ್ಲವ ಸಮುದಾಯದ ಓಲೈಕೆಯ ತಂತ್ರಗಾರಿಕೆ ಇರಬಹುದು. ಆದರೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಾಳಯದಲ್ಲಿ ಕಿಂಚಿತ್ತೂ ಬೆಲೆ ಇಲ್ಲದಾಯಿತೇ ಎಂಬ ಪ್ರಶ್ನೆಗಳ ಸುರಿಮಳೆ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯ ಬಿಲ್ಲವ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕರಾವಳಿಯಲ್ಲಿ ಬಿಲ್ಲವ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ. ಆದರೆ ಅಲ್ಪಸಂಖ್ಯಾತ ನಾಯಕ, ವಿರೋಧ ಪಕ್ಷದ ಉಪನಾಯಕ ಎಂಬೆಲ್ಲಾ ಬಿರುದು ಪಡೆದುಕೊಂಡಿರುವ ಯು ಟಿ ಖಾದರ್ ಕನಿಷ್ಠ ಸಿದ್ದರಾಮಯ್ಯ ಅವರಲ್ಲಿ ನ್ಯಾಯಕ್ಕಾಗಿ ಹಾತೊರೆಯುತ್ತಿರುವ ಮುಸ್ಲಿಂ ಕುಟುಂಬಗಳನ್ನು ಭೇಟಿ ಮಾಡಿಸಿ ಸಾಂತ್ವನ ಹೇಳಿಸುವ ಧೈರ್ಯವನ್ನೂ ತೋರಿಲ್ಲ. ಚುನಾವಣಾ ಹೊಸ್ತಿಲಲ್ಲೇ ಅಲ್ಪಸಂಖ್ಯಾತರ ರಕ್ಷಕರು, ನ್ಯಾಯ ನೀಡುವವರು ಎಂದೆಲ್ಲಾ ಹೇಳಿಕೊಂಡು ಬರುವ ಕೈ ನಾಯಕ, ಅದರಲ್ಲೂ ಸ್ವತಃ ಅಲ್ಪಸಂಖ್ಯಾತ ನಾಯಕ ಯು ಟಿ ಖಾದರ್ ಅವರಿಗೆ ಸಮುದಾಯದ ಯುವಕರ ಸಮಸ್ಯೆ ಸಮಸ್ಯೆಯಾಗದೇ ಹೋದದ್ದೇ ವಿಪರ್ಯಾಸ ಎಂಬ ವಿಮರ್ಶೆ-ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಬಿರುಸಾಗೇ ನಡೆಯುತ್ತಿದೆ. ಚುನಾವಣಾ ವರ್ಷದಲ್ಲಿ ಈ ಎಲ್ಲಾ ಚರ್ಚೆಗಳು ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಕಾದು ನೋಡಬೇಕಷ್ಟೆ.
0 comments:
Post a Comment