ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ74ನೇ ಗಣರಾಜ್ಯೋತ್ಸವ ಆಚರಣೆ
ಉಡುಪಿ, ಜನವರಿ 26, 2023 (ಕರಾವಳಿ ಟೈಮ್ಸ್) : ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವವು ಗುರುವಾರ ಆಚರಿಸಲಾಯಿತು.
ಧ್ವಜಾರೋಹಣಗೈದು ಮಾತನಾಡಿದ ಎಸ್ ಡಿ ಎಂ ಕಾಲೇಜು ಶರೀರ ರಚನಾ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ ವಿ ಕೆ ಶ್ರೀಧರ ಹೊಳ್ಳ, ಸ್ವಸ್ಥ ಸಮಾಜ ಇದ್ದಾಗ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಸ್ವಸ್ಥ ಸಮಾಜವನ್ನು ಬೆಳೆಸಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಪಾಲಿಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಮಮತಾ ಕೆ ವಿ ಮಾತನಾಡಿ, ದೊರೆತ ಗಣರಾಜ್ಯವನ್ನು ಉಳಿಸಿಕೊಂಡು ಬರುವ ಜವಾಬ್ದಾರಿ ನಮ್ಮದಾಗಿದ್ದು, ಅದನ್ನು ನೆರವೇರಿಸಲು ಪ್ರತಿಯೊಬ್ಬರೂ ಸರಿಯಾದ ಮಾರ್ಗವನ್ನು ಅನುಸರಿಸಬೇಕು. ಇಂದು ಭಾರತದ ಹಿರಿಮೆ ಪ್ರಪಂಚದೆಲ್ಲೆಡೆ ಪಸರಿಸಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ನಾಗರಾಜ ಎಸ್, ಸಹ ವೈದ್ಯಕೀಯ ಅಧೀಕ್ಷಕ ಡಾ ದೀಪಕ್ ಎಸ್ ಎಂ, ಸ್ನಾತಕೋತ್ತರ ವಿಭಾಗದ ಉಪಾಧ್ಯಕ್ಷ ಡಾ ಸುಚೇತ ಕುಮಾರಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ ವೀರಕುಮಾರ ಕೆ, ಎಸ್ ಡಿ ಎಂ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ ಮುರಳೀಧರ ಆರ್ ಬಲ್ಲಾಳ್, ಕಮ್ಯೂನಿಟಿ ಸರ್ವಿಸ್ ಕಮಿಟಿಯ ಮುಖ್ಯಸ್ಥ ಡಾ ಎಸ್ ಆರ್ ಮೊಹರೆರ್, ರಾಷ್ಟ್ರೀಯ ಸೇವಾ ಸಹ ಯೋಜನಾಧಿಕಾರಿ ಡಾ ಯೋಗೀಶ್ ಆಚಾರ್ಯ, ಆಸ್ಪತ್ರೆಯ ವ್ಯವಸ್ಥಾಪಕ ನಾಗೇಶ್ ಸಿ ಎಚ್, ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೈಹಿಕ ಶಿಕ್ಷಕ ಆದರ್ಶ್ ಶೆಟ್ಟಿ ಧ್ವಜಾರೋಹಣ ಮತ್ತು ಧ್ವಜವಂದನಾ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಮೋಹನ್ ಕುಮಾರ್ ಸ್ವಾಗತಿಸಿ, ಕು ಪೂಜಾ ಎಂ ನಾೈಕ್ ವಂದಿಸಿದರು. ಕು. ಇಂಚರ ಎಸ್ ಜಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.
0 comments:
Post a Comment